

ಬೆಂಗಳೂರು: ಕರೊನಾ ಸೋಂಕಿಗೆ ಒಳಗಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಕ್ಷೇಮ ವಿಚಾರಿಸಿದ್ದಾರೆ.
ಮಂಗಳವಾರ ಸಂಜೆ 4:30ಕ್ಕೆ ಸಿಎಂಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ದೂರವಾಣಿ ಕರೆ ಬಂದಿತ್ತು. ಸುಮಾರು ಐದು ನಿಮಿಷ ಮಾತುಕತೆ ನಡೆಸಿದ ಪ್ರಧಾನಿ, ಸೂಕ್ತ ಚಿಕಿತ್ಸೆ ಪಡೆಯಿರಿ ಎಂಬ ಸಲಹೆ ನೀಡಿದ್ದಾರೆ.
ತನ್ನ ಜತೆಗೆ ಕುಟುಂಬದ ಇಬ್ಬರು ಸದಸ್ಯರಿಗೂ ಕರೊನಾ ಸೋಂಕು ತಗುಲಿದೆ ಎಂದು ಬೊಮ್ಮಾಯಿ ಹೇಳಿದಾಗ, ಎಲ್ಲರೂ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆಯೂ ಪ್ರಧಾನಿಗೆ ಮಾಹಿತಿ ನೀಡಿದ ಸಿಎಂ, ಇದೀಗ ಬೆಂಗಳೂರಿನಲ್ಲಿ ವರ್ಚುವಲ್ ಆಗಿ ಸಭೆ ನಡೆಸುತ್ತಿದ್ದೇನೆ. ಜ. 13ರ ಸಂಜೆ ತಾವು ಕರೆದಿರುವ ಕೋವಿಡ್ ವರ್ಚುಯಲ್ ಸಭೆಗೆ ಪೂರ್ವಭಾವಿ ರೂಪದಲ್ಲಿ ಈ ಸಭೆ ನಡೆಸುತ್ತಿದ್ದೇನೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ತಜ್ಞರು ನೀಡುವ ಸಲಹೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ.