

ಮಂಡ್ಯ: ಮನೆ ಮನೆಯಲ್ಲಿ ಹಳೇ ಚಡ್ಡಿ ಸಂಗ್ರಹಿಸಿ ಕೆಪಿಸಿಸಿ ಕಚೇರಿಗೆ ಆರ್ಎಸ್ಎಸ್ ಕಾರ್ಯಕರ್ತರು ಪಾರ್ಸಲ್ ಕಳುಹಿಸಿ ಆಕ್ರೋಶ ಹೊರಹಾಕಿದರು.
ಪಠ್ಯ ಪರಿಷ್ಕರಣೆ ವಿವಾದ ಸಂಬಂಧ ಶಿಕ್ಷಣ ಸಚಿವ ನಾಗೇಶ್ ಅವರ ನಿವಾಸಕ್ಕೆ ಎನ್ಎಸ್ಯುಐ ಕಾರ್ಯಕರ್ತರು ಮುತ್ತಿಗೆ ಹಾಕಿ ಚಡ್ಡಿ ಸುಟ್ಟು ಹಾಕಿದ್ದರು. ಚಡ್ಡಿ ಸುಡುವ ಅಭಿಯಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆರ್ಎಸ್ಎಸ್ ಕಾರ್ಯಕರ್ತರು ಕೆ.ಆರ್.ಪೇಟೆಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಆರ್ಎಸ್ಎಸ್ ಬಗ್ಗೆ ಗೊತ್ತಿಲ್ಲದೆ ಸಿದ್ದರಾಮಯ್ಯ ಮಾತನಾಡುತ್ತಾರೆ. ಆರ್ಎಸ್ಎಸ್ ಕ್ಯಾಂಪ್‌ನಲ್ಲಿ ಸಿದ್ದು ಭಾಗವಹಿಸಲಿ, ಸಂಘದ ಸಿದ್ಧಾಂತ, ದೇಶ ಭಕ್ತಿ ತಿಳಿಯುತ್ತದೆ. ಎಲ್ಲ ಕಡೆ ಚಡ್ಡಿ ಸುಡುತ್ತೇವೆಂದು ಕೈ ನಾಯಕರು ಹೇಳಿದ್ದಾರೆ. ಅವರಿಗೆ ತೊಂದರೆ ಆಗಬಾರದು, ಅವರು ಇಲ್ಲಿಯವರೆಗೆ ಬರಬಾರದು. ಹಾಗಾಗಿ ನಾವೇ ಚಡ್ಡಿ ಪಾರ್ಸಲ್ ಮಾಡಿದ್ದೇವೆ. ಕಾಂಗ್ರೆಸ್ ಕೇಂದ್ರ ಕಚೇರಿಗೆ ಕಳುಹಿಸಿ ಕೊಡ್ತೀವಿ. ಅಲ್ಲೇ ಸುಡಲಿ, ಇಲ್ಲಿಗೆ ಬರುವುದು ಅವರು ಬೇಡ. ಚಡ್ಡಿ ಸುಟ್ಟುಕೊಂಡೇ ಜೀವನ ಪೂರ ಕಾಲ ಕಳೆಯಲಿ ಎಂದು ಆಕ್ರೋಶ ಹೊರಹಾಕಿದರು.