More

    ಜನದನಿಗೆ ಪ್ರಜಾಧ್ವನಿ: ಜನರ ಸಮಸ್ಯೆಗೆ ಸ್ಪಂದಿಸಲು ನೂತನ ಆ್ಯಪ್​

    ಬೆಂಗಳೂರು: ಸಾರ್ವಜನಿಕರು ಮತ್ತು ಶಾಸಕರು ಹೊತ್ತು ತರುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಲು ಸರ್ಕಾರದ ಪ್ರಜಾಧ್ವನಿ ಸಿದ್ಧವಾಗಿದೆ. ಎಲ್ಲ ಸಚಿವರು ಜಿಲ್ಲಾಮಟ್ಟದಲ್ಲಿ ಜನತಾ ದರ್ಶನ ನಡೆಸಬೇಕೆಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಜನತಾ ದರ್ಶನ ಆರಂಭಕ್ಕೆ ಮುನ್ನ ಪ್ರಜಾಧ್ವನಿ ಆ್ಯಪ್​ ಸಿದ್ಧ ಮಾಡಲಾಗಿದೆ. ಜನತಾ ದರ್ಶನದಲ್ಲಿ ಬರುವ ಎಲ್ಲ ಅಹವಾಲುಗಳಿಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕವೇ ಪರಿಹಾರ ನೀಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಸರ್ಕಾರದಲ್ಲಿ ಈಗ ಐಪಿಜಿಆರ್​ಎಸ್ ಎಂಬ ಆಪ್ ಇದ್ದರೆ, ಇನ್ನೊಂದೆಡೆ ಇ- ಆಫೀಸ್ ತಂತ್ರಾಂಶ ಪ್ರತ್ಯೇಕವಾಗಿದೆ. ಆದರೆ, ಪ್ರಜಾಧ್ವನಿ ಆಪ್ ಎರಡು ತಂತ್ರಾಂಶಗಳನ್ನು ಸೇರಿಸಿ ರೂಪಿಸಿರುವ ಹೈಬ್ರಿಡ್ ವ್ಯವಸ್ಥೆಯಾಗಿದೆ.

    ಭಿನ್ನ ವ್ಯವಸ್ಥೆ: ಪ್ರಸ್ತುತ ಅರ್ಜಿ ಕೊಟ್ಟರೆ ಅದನ್ನು ಪಡೆದು ಉತ್ತರ ನೀಡುವ ವ್ಯವಸ್ಥೆ ಇದೆ. ಅದರಲ್ಲಿ ಎಲ್ಲ ಅರ್ಜಿದಾರರಿಗೂ ಪರಿಹಾರ ಇರಲಿ, ಉತ್ತರವೂ ಬಂದಿರುವುದಿಲ್ಲ. ಆದರೆ, ಪ್ರಜಾಧ್ವನಿ ಇದಕ್ಕಿಂತ ಭಿನ್ನ ವ್ಯವಸ್ಥೆ ಹೊಂದಿದೆ. ದಾಖಲಾದ ಅರ್ಜಿಗಳಿಗೆ ಇಲಾಖೆ ಮುಖ್ಯಸ್ಥರು ಉತ್ತರದಾಯಿಯಾಗಿರುತ್ತಾರೆ. ಬಂದ ಅರ್ಜಿಯ ಮೇಲೆ ಕೈಗೊಂಡ ಕ್ರಮಗಳನ್ನು ದಾಖಲಿಸುವ ಹಾಗೂ ಅರ್ಜಿದಾರರಿಗೆ ಮಾಹಿತಿ ನೀಡುವ ತನಕ ಇಲಾಖಾ ಮುಖ್ಯಸ್ಥರದ್ದೇ ಜವಾಬ್ದಾರಿಯಾಗಿರುತ್ತದೆ. ಇಲ್ಲದಿದ್ದರೆ ಅವರನ್ನೇ ಹೊಣೆ ಮಾಡಲಾಗುತ್ತದೆ.

    ಸಿಎಂ ಹಾಗೂ ಸರ್ಕಾರಕ್ಕೆ ದಾಖಲಾಗುವ ಪ್ರತಿಯೊಂದು ಅರ್ಜಿಯನ್ನು ಪ್ರಜಾಧ್ವನಿಯಲ್ಲಿ ಸೇರಿಸಲಾಗುತ್ತದೆ. ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು ನಿರಂತರವಾಗಿ ಫಾಲೋಅಪ್ ಮಾಡುತ್ತಿರುತ್ತಾರೆ. ಆದ್ದರಿಂದ ಯಾವುದೇ ಅಧಿಕಾರಿ ಕ್ರಮ ಕೈಗೊಳ್ಳುವುದರಿಂದ ಜಾರಿಕೊಳ್ಳಲು ಅವಕಾಶವೇ ಇಲ್ಲ. ಅರ್ಜಿದಾರರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು ಒಟ್ಟಾರೆ ಉದ್ದೇಶ ಎಂದು ಸಿಎಂ ಸಚಿವಾಲಯದ ಮೂಲಗಳು ವಿವರಿಸುತ್ತವೆ.

    ಎಸ್​ಎಂಎಸ್ ಮಾಹಿತಿ: ಅರ್ಜಿ ಎಲ್ಲಿದೆ ಎಂಬುದರಿಂದ ಹಿಡಿದು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ತನಕ ಪ್ರತಿ ಹಂತದಲ್ಲಿಯೂ ಎಸ್​ಎಂಎಸ್ ಮೂಲಕ ಮಾಹಿತಿ ರವಾನೆ ಮಾಡುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅಗತ್ಯವಿದ್ದಲ್ಲಿ ದಾಖಲೆಯ ಪೋಟೋವನ್ನೂ ಕಳುಹಿಸಲಾಗುತ್ತದೆ.

    ಶಾಸಕರಿಗೂ ದನಿ: ಶಾಸಕರು ಮುಖ್ಯಮಂತ್ರಿ ಅಥವಾ ಸರ್ಕಾರಕ್ಕೆ ಸಲ್ಲಿಸುವ ಸಾರ್ವಜನಿಕರ ಕುಂದುಕೊರತೆಯ ಅರ್ಜಿಗಳು ಹಾಗೂ ಸದನದಲ್ಲಿ ಮಾತನಾಡುವ ವಿಷಯಗಳನ್ನು ಸಹ ಪ್ರಜಾಧ್ವನಿ ಆಪ್ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಗುತ್ತದೆ. ಶಾಸಕರು ಬಹುತೇಕ ಅವರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿರುತ್ತಾರೆ. ಆದ್ದರಿಂದ ಆ ಸಮಸ್ಯೆಗೂ ಪರಿಹಾರ ಸಿಗುವಂತಾಗಬೇಕು ಎಂಬ ಆಶಯವನ್ನು ಸಹ ಹೊಂದಲಾಗಿದೆ.

    1500 ಪತ್ರಗಳು: ಶಾಸಕರು ಉಭಯ ಸದನದಲ್ಲಿ ಮಾತನಾಡಿರುವ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಅಂದಾಜು 1,500 ಪತ್ರಗಳನ್ನು ಈಗಾಗಲೇ ವಿವಿಧ ಇಲಾಖೆಗಳಿಗೆ ರವಾನಿಸ ಲಾಗಿದೆ. ಶೀಘ್ರದಲ್ಲಿಯೇ ಅವುಗಳನ್ನು ಹೊಸ ಆಪ್​ಗೆ ಅಳವಡಿಸಲಾಗುತ್ತದೆ. ಆ ಮೂಲಕ ಶಾಸಕರು ಎತ್ತಿದ ಪ್ರಶ್ನೆಗಳಿಗೆ ಪರಿಹಾರದ ಉತ್ತರ ಸಿಗುವಂತಾಗಬೇಕು ಎಂಬುದು ಉದ್ದೇಶವಾಗಿದೆ.

    ಸಚಿವರ ಜನತಾ ದರ್ಶನಕ್ಕೂ ಪರಿಹಾರ: ಸಚಿವರು ಜಿಲ್ಲೆಗಳಲ್ಲಿ ನಡೆಸುವ ಜನತಾದರ್ಶನದಲ್ಲಿ ಬರುವ ಅರ್ಜಿಗಳನ್ನು ಸಹ ಪ್ರಜಾಧ್ವನಿ ಆಪ್ ಮೂಲಕ ಆಯಾ ಇಲಾಖೆಗಳಿಗೆ ರವಾನೆ ಮಾಡಲಾಗುತ್ತದೆ.

    ಪ್ರತ್ಯೇಕ ಅಧಿಕಾರಿ ನೇಮಕ: ಜನರಿಂದ ಎದುರಾಗುವ ಸಮಸ್ಯೆಗಳ ನಿರ್ವಹಣೆಗೆ ಈಗ ಪ್ರತ್ಯೇಕ ಅಧಿಕಾರಿಯನ್ನು ಸಿಎಂ ಸಚಿವಾಲಯದಲ್ಲಿ ನೇಮಕ ಮಾಡಲಾಗಿದೆ. ಒಟ್ಟು ಇಬ್ಬರು ಅಧಿಕಾರಿಗಳು ಜನರಿಂದ ಹಾಗೂ ಶಾಸಕರಿಂದ ಬರುವ ಅರ್ಜಿಗಳ ವಿಲೇವಾರಿ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

    ಪ್ರಜಾಧ್ವನಿ ಹೆಸರು ಏಕೆ?

    ಜನರ ಸಮಸ್ಯೆಗೆ ಸ್ಪಂದಿಸುವ ಈ ಹೊಸ ವ್ಯವಸ್ಥೆಗೆ ಪ್ರಜಾಧ್ವನಿ ಎಂಬ ಹೆಸರು ಇಡಲು ಕಾರಣಗಳಿವೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ನಡೆಸಿದ ಯಾತ್ರೆಗೂ ಪ್ರಜಾಧ್ವನಿ ಎಂದೇ ಹೆಸರನ್ನಿಡಲಾಗಿತ್ತು. ಪ್ರಜಾಧ್ವನಿ ಎಂಬ ಹೆಸರು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಆದ್ದರಿಂದಲೇ ಹೊಸ ಆಪ್​ಗೂ ಪ್ರಜಾಧ್ವನಿ ಹೆಸರನ್ನಿಡಲು ನಿರ್ಧರಿಸಲಾಗಿದೆ.

    • ಐಪಿಜಿಆರ್​ಎಸ್ ಮತ್ತು ಇ-ಆಫೀಸ್ ಸೇರಿಸಿ ಹೊಸ ಹೈಬ್ರಿಡ್ ಆ್ಯಪ್​
    • ಜನರ ಸಮಸ್ಯೆ, ಶಾಸಕರ ಮನವಿ, ಶಾಸನಸಭೆಯಲ್ಲಿ ಕೇಳಿಬಂದ ಒತ್ತಾಯಗಳಿಗೆ ಪರಿಹಾರ
    • ತೆಗೆದುಕೊಂಡ ಕ್ರಮದ ಬಗ್ಗೆ ಇಲಾಖೆ ಮುಖ್ಯಸ್ಥರು ವರದಿ ಆಪ್ ಮೂಲಕ ನೀಡಬೇಕು
    • ಸಚಿವರ ಜನತಾ ದರ್ಶನ ಆರಂಭಕ್ಕೆ ಮುನ್ನ ಇಂತಹದೊಂದು ಉಪಕ್ರಮ
    • ಇದುವರೆಗೂ ಬಂದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿತ್ತು, ವ್ಯವಸ್ಥಿತವಾಗಿ ಆಗುತ್ತಿರಲಿಲ್ಲ

    ಪ್ರಧಾನಿ ಮೋದಿಯನ್ನು ‘ಖಿಲಾಡಿ ನಂ. 1’ ಎಂದು ಕರೆದ ನಟ ಪ್ರಕಾಶ್ ರಾಜ್

    ಈ ಲೋಕವನ್ನೇ ಬಿಟ್ಟು ಹೋದ ಪತ್ನಿ; ಪತಿ ಹಾಗೂ ಕುಟುಂಬಸ್ಥರು ಮನೆಬಿಟ್ಟು ಪರಾರಿ!

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts