

ಬ್ಯಾಂಕಾಕ್: ಮ್ಯಾನ್ಮಾರ್ ದೇಶದ ಮಾಜಿ ನಾಯಕಿ, ನಾಗರಿಕ ಹೋರಾಗಾರ್ತಿ ಆಂಗ್ ಸಾನ್ ಸೂಕಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿರುವ ನ್ಯಾಯಾಲಯವು, 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ರಾಜಕೀಯ ಸಹೋದ್ಯೋಗಿಯೊಬ್ಬರಿಂದ ಚಿನ್ನ ಮತ್ತು ಲಕ್ಷಾಂತರ ಡಾಲರ್ ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಸೀಕಿ ವಿರುದ್ಧ 2021ರ ಫೆಬ್ರವರಿಯಲ್ಲಿ ಕೇಳಿಬಂದಿತ್ತು. ಮ್ಯಾನ್ಮಾರ್ ಸೇನೆಯು ಸೂಕಿ ಬೆಂಬಲಿತ ಸರ್ಕಾರವನ್ನು ಪದಚ್ಯುತಗೊಳಿಸಿ, ತನ್ನ ವಶಕ್ಕೆ ಆಡಳಿತ ಪಡೆದುಕೊಂಡಿತ್ತು. ವಿಚಾರಣೆಯಲ್ಲಿ ತನ್ನ ಮೇಲಿನ ಭ್ರಷ್ಟಾಚಾರ ಆರೋಪವನ್ನು ಸೂಕಿ ತಳ್ಳಿ ಹಾಕಿದ್ದರಾದರೂ ಮ್ಯಾನ್ಮಾರ್ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿದೆ.
76 ವರ್ಷದ ಸೂಕಿ ಅವರನ್ನು ರಾಜಕೀಯದಿಂದ ದೂರ ಇರಿಸಲು ಅಲ್ಲಿನ ಮಿಲಿಟರಿ ಆಡಳಿತ ಉದ್ದೇಶಿಸಿದೆ. ಅವರು ಯಾವ ತಪ್ಪು ಮಾಡದಿದ್ದರೂ ಶಿಕ್ಷೆ ವಿಧಿಸಿದೆ ಎಂದು ಸೂಕಿ ಬೆಂಬಲಿಗರು ಆರೋಪಿಸಿದ್ದಾರೆ.