

ವಿಜಯಪುರ: ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ನಾಯಕನಾಗುವ ಎಲ್ಲ ಕ್ವಾಲಿಟಿಯೂ ಇದೆ. ಯಾರ ಹಣೆ ಬರಹದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ಸಿಎಂ ಮಗ ಸಿಎಂ ಆದರೆ ತಪ್ಪೇನು? ವಿಜಯೇಂದ್ರ ಸಿಎಂ ಆಗಲಿ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ನಿರಾಣಿ, ನಮ್ಮ ರಾಜ್ಯದಲ್ಲಿದ್ದವರು ಪ್ರಧಾನಿಯಾದರು. ಮುಖ್ಯಮಂತ್ರಿ ಮಗ ಮುಖ್ಯಮಂತ್ರಿ ಆದ್ರೆ ಏನ್ ತಪ್ಪಿದೆ? ಈ ಬಗ್ಗೆ ನಿರ್ಧರಿಸಲು ರಾಜ್ಯ-ರಾಷ್ಟ್ರ ನಾಯಕರಿದ್ದಾರೆ. ಸಿಎಂ ಆಗಲು ವಿಜಯೇಂದ್ರಗೆ ಎಲ್ಲ ಕ್ವಾಲಿಟಿಯೂ ಇದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ವಿಜಯೇಂದ್ರಗೆ ಯಾವ ಜವಾಬ್ದಾರಿ ನೀಡಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತೆ. ಸಚಿವ ಸಂಪುಟ ವಿಸ್ತರಣೆ ಪಕ್ಷದ ನಾಯಕರಿಗೆ ಬಿಟ್ಟದ್ದು ಎಂದ ನಿರಾಣಿ,
ಕಾಂಗ್ರೆಸ್ ನಾಯಕರು ಮೊದಲು ತಮ್ಮ ಪಕ್ಷವನ್ನು ಸರಿ ಮಾಡಿಕೊಳ್ಳಲಿ. ಯಡಿಯೂರಪ್ಪ ನಮ್ಮ ಪಕ್ಷದ ಮುಖಂಡರು, ಈ ಬಗ್ಗೆ ಎರಡು ಮಾತಿಲ್ಲ. ಒಂದು ಕುಟುಂಬದಲ್ಲಿ ಮೂರು ಸೀಟ್ ಇದೆ. ದೇಶದಲ್ಲೇ ಯಾರಿಗೂ ಕೊಟ್ಟಿಲ್ಲ, ಇದು ಎಲ್ಲರಿಗೂ ಗೊತ್ತಿರೋದೆ. ವಿಜಯೇಂದ್ರ ಹೆಚ್ಚಿನ ಕೆಲಸ ಮಾಡಲಿ, ಬೆಳೆಯಲಿ ಎನ್ನುವುದು ಇದೆ. ಮುಂದೆ ಯಡಿಯೂರಪ್ಪರ, ಸಂಘ ಪರಿವಾರ, ಹಿರಿಯರ ಆಶೀರ್ವಾದ, ಮಾರ್ಗದರ್ಶನದಿಂದ ವಿಜಯೇಂದ್ರ ಎತ್ತರಕ್ಕೆ ಬೆಳೆಯುತ್ತಾನೆ ಎನ್ನುವ ಮೂಲಕ ಬಿಎಸ್ವೈರನ್ನು ಸೈಡ್‌ಲೈನ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರ ವಿರುದ್ಧ ವಾಗ್ದಾಳಿ ನಡೆಸಿದರು.