ನಾವಲ್​ ಕರೊನಾ ವೈರಾಣುವಿನ ಪ್ರತಿರೋಧಕ ಅಣು ಪತ್ತೆ

sars molecule
Published on

ವಾಷಿಂಗ್ಟನ್​: ಕರೊನಾ ಸೋಂಕು ಉಂಟು ಮಾಡುವ ಸಾರ್ಸ್​ ಕೋವಿಡ್​ 2 ಎಂಬ ವೈರಾಣುವಿನಲ್ಲಿರುವ ಹಾಗೂ ಅದರ ಬೆಳವಣಿಗೆಗೆ ಸಹಕರಿಸುವ ಪ್ರಮುಖವಾದ ಪ್ರೋಟೀನ್​ ಅನ್ನು ತಡೆಗಟ್ಟುವ ಸಣ್ಣ ಕಣವೊಂದನ್ನು ಪತ್ತೆ ಮಾಡಿರುವುದಾಗಿ ಸಂಶೋಧಕರು ಹೇಳಿದ್ದಾರೆ. ತನ್ಮೂಲಕ, ಕರೊನಾ ಸೋಂಕಿನ ಚಿಕಿತ್ಸೆಗೆ ಪರಿಣಾಮಕಾರಿ ಔಷಧ ಕಂಡುಹಿಡಿಯಲು ತುಂಬಾ ಅನುಕೂಲವಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಅಮೆರಿಕದ ಜಾರ್ಜಿಯಾ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಕಣವನ್ನು ಪತ್ತೆ ಮಾಡಿದೆ. ಸಾರ್ಸ್​ ಕೋವಿಡ್​ 2ನಲ್ಲಿರುವ ಪ್ರೋಟೀನ್​ PLpro ಅದಕ್ಕೆ ವೃದ್ಧಿಸುವ ಹಾಗೂ ಸೋಂಕಿತರ ದೇಹದಲ್ಲಿರುವ ರೋಗನಿರೋಧಕಶಕ್ತಿಯನ್ನು ಕುಂಠಿತಗೊಳಿಸಲು ಬಲವನ್ನು ಒದಗಿಸುತ್ತದೆ. ನ್ಯಾಪ್ತಲೀನ್​ ಆಧಾರಿತವಾದ PLpro ಇನ್​ಹಿಬಿಟರ್​ಗಳು ಸಾರ್ಸ್​ ಕೋವಿಡ್​ 2 PLpro ಪ್ರೋಟೀನ್​ನಲ್ಲಿರುವ ವೈರಾಣುವಿನ ವೃದ್ಧಿ ಮತ್ತು ಸೋಂಕಿತರ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹತ್ತಿಕ್ಕುವ ಬಲವನ್ನೇ ಉಡುಗಿಸುತ್ತವೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅಂದಾಜು 12 ವರ್ಷಗಳ ಹಿಂದೆ ಸಾರ್ಸ್​ ವೈರಾಣುವಿನಿಂದ ಆಗುವ ಸೋಂಕನ್ನು ಸಮರ್ಥವಾಗಿ ತಡೆಗಟ್ಟಬಲ್ಲ ಕಾಂಪೌಂಡ್​ಗಳನ್ನು ಪತ್ತೆ ಮಾಡಲಾಗಿತ್ತು. ಆದರೆ ಸಾರ್ಸ್​ನ ಹರಡುವಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಬಗೆಗಿನ ಹೆಚ್ಚಿನ ಸಂಶೋಧನೆಯನ್ನು ನಿಲ್ಲಿಸಲಾಗಿತ್ತು. ಇದೀಗ ಹಬ್ಬಿರುವ ಕರೊನಾ ವೈರಾಣು ಇನ್ನಷ್ಟು ಕಾಲ ಇರುವುದು ಖಚಿತಪಟ್ಟಿದೆ. ಈಗ ಪತ್ತೆಯಾಗಿರುವ ಕರೊನಾ ವೈರಾಣು ಅಲ್ಲದಿದ್ದರೂ ಬೇರೊಂದು ಪ್ರಬೇಧದ ಕರೊನಾ ವೈರಾಣು ನಮ್ಮನ್ನು ಬಾಧಿಸುವುದು ನಿಶ್ಚಿತವಾಗಿದೆ. ಆದ್ದರಿಂದ, ಆ ಸಂಶೋಧನೆಯನ್ನು ಮುಂದುವರಿಸಿ, ಇದೀಗ ಕರೊನಾ ವೈರಾಣುವಿಗೆ ವೃದ್ಧಿಸುವ ಶಕ್ತಿಯನ್ನೇ ಬಲಹೀನಗೊಳಿಸುವ ಕಾಂಪೌಂಡ್​ ಅನ್ನು ಪತ್ತೆ ಮಾಡಿರುವುದಾಗಿ ಸಂಶೋಧಕರು ಹೇಳಿದ್ದಾರೆ.

ಇದೀಗ ಪತ್ತೆ ಮಾಡಲಾಗಿರುವ ಕಾಂಪೌಂಡ್​ಗಳು ಔಷಧವಾಗಿ ಬಳಸಲು ಸಮರ್ಥವಾಗಿವೆ. ಅದರಲ್ಲೂ ವಿಶೇಷವಾಗಿ ಒಂದು ಔಷಧದಲ್ಲಿ ಏನೆಲ್ಲ ಅಂಶಗಳಿರಬೇಕು ಎಂದು ಬಯಸುತ್ತೇವೋ ಆ ಎಲ್ಲ ಗುಣಗಳು ಇದರಲ್ಲಿ ಇದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net