ಈಶ್ವರಪ್ಪ ಅರೆಸ್ಟ್​ ಆದ ಬಳಿಕವೇ ನನ್ನ ತಮ್ಮನ ಅಂತ್ಯಸಂಸ್ಕಾರ: ಮೃತ ಗುತ್ತಿಗೆದಾರನ ಅಣ್ಣ ಆಕ್ರೋಶ

New Project(20)
Published on

ಬೆಳಗಾವಿ: ನನ್ನ ತಮ್ಮ ಸಂತೋಷ್​ ಪಾಟೀಲ್​ನ ಆತ್ಮಹತ್ಯೆಗೆ ಸಚಿವ ಕೆ.ಎಸ್​.ಈಶ್ವರಪ್ಪ ಅವರೇ ಕಾರಣ. ಈಶ್ವರಪ್ಪ ಅವರನ್ನು ಬಂಧಿಸಿ, ವಿಚಾರಣೆ ನಡೆಸುವವರೆಗೂ ನನ್ನ ತಮ್ಮನ ಅಂತ್ಯಸಂಸ್ಕಾರ ಮಾಡಲ್ಲ ಎಂದು ಸಹೋದರ ಪ್ರಶಾಂತ ಪಾಟೀಲ್​ ಪಟ್ಟು ಹಿಡಿದಿದ್ದಾರೆ.

ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್​ ಪಾಟೀಲ್ ಡೆತ್​ನೋಟ್​ ಬರೆದು ಆತ್ಮಹತ್ಯೆ ಮಾಡ ಸುದ್ದಿ ಕೇಳಿ ಇಲ್ಲಿನ ಕ್ಯಾಂಪ್​ ಪೊಲೀಸ್​ ಠಾಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ ಪಾಟೀಲ್​, ಸಚಿವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ನನ್ನ ತಮ್ಮನ ಸಾವಿಗೆ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು ಎಂದು ಕಣ್ಣೀರು ಹಾಕಿದರು.

ಬೆಳಗಾವಿಯ ಸಮರ್ಥ ಕಾಲನಿಯಲ್ಲಿ ವಾಸವಾಗಿದ್ದ ಸಂತೋಷ್​ ಪಾಟೀಲ್​ 4 ಕೋಟಿ ರೂ. ಸಾಲ ಮಾಡಿ ಗುತ್ತಿಗೆದಾರನಾಗಿ ಹಿಂಡಲಗಾ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾಮಗಾರಿ ನಡೆಸಿದ್ದರು. ಇಲಾಖೆಯ ಸಂಬಂಧಿತ ಅಧಿಕಾರಿಗಳ ಅನುಮತಿ ಪಡೆಯದೆ ಕಾಮಗಾರಿ ನಡೆಸಲಾಗಿದೆ ಎಂಬ ಕಾರಣ ನೀಡಿ ಕಾಮಗಾರಿಯ ಬಿಲ್​ ಬಿಡುಗಡೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂತೋಷ್​ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಿಗೂ ಪತ್ರ ಬರೆದು, ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಈ ನಡುವೆ ಸಚಿವ ಕೆ.ಎಸ್​.ಈಶ್ವರಪ್ಪ ವಿರುದ್ಧ 40 ಪರ್ಸೆಂಟ್​ ಕಮಿಷನ್​ ಆರೋಪವನ್ನೂ ಮಾಡಿದ್ದರು. ಆ ನಂತರದ ನಡೆದ ಬೆಳವಣಿಗೆಯಲ್ಲಿ ಗುತ್ತಿಗೆದಾರ ಸಂತೋಷ್​ ಪಾಟೀಲ್​ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗಿತ್ತು. ಕಳೆದೆರಡು ದಿನಗಳಿಂದ ಸಂತೋಷ್​ ಪಾಟೀಲ್​ ನಾಪತ್ತೆಯಾಗಿದ್ದರು. ಮಂಗಳವಾರ ಬೆಳಗ್ಗೆ ಉಡುಪಿಯ ಲಾಡ್ಜ್​ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಂತೋಷ್​ ಪಾಟೀಲ್​ ಶವ ಪತ್ತೆಯಾಗಿದೆ. ಅಂತಿಮ ಸಂಸ್ಕಾರಕ್ಕಾಗಿ ಮೃತದೇಹವನ್ನು ಬೆಳಗಾವಿ ತಾಲೂಕಿನ ಬಡಸ್​ ಗ್ರಾಮಕ್ಕೆ ತರಲಾಗುತ್ತಿದೆ ಎಂದು ಪ್ರಶಾಂತ್​ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net