ಮೇಲುಕೋಟೆಯಲ್ಲಿ ಕೃಷ್ಣರಾಜಮುಡಿ ಉತ್ಸವಕ್ಕೆ ಸಕಲ ಸಿದ್ಧತೆ: ಜು.14ರಿಂದ ವಿಶೇಷ ಧಾರ್ಮಿಕ ಕೈಂಕರ್ಯ

melukote krishnarajamudi
Published on

ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿ ಕೃಷ್ಣರಾಜಮುಡಿ ಉತ್ಸವ ಜು.19ರಂದು ರಾತ್ರಿ ನಡೆಯಲಿದೆ. ಈ ಸಂಬಂಧ ಧಾರ್ಮಿಕ ಕೈಂಕರ್ಯಗಳು ಜು.14ರ ಅಂಕುರಾರ್ಪಣೆಯೊಂದಿಗೆ ಆರಂಭವಾಗಿ, ಜು. 25ರಂದು ನಡೆಯುವ ಪುಷ್ಪಯಾಗದೊಂದಿಗೆ ಮುಕ್ತಾಯವಾಗಲಿದೆ.

ಕೃಷ್ಣರಾಜರಾಜಮುಡಿ ಉತ್ಸವದಂದು ರಾತ್ರಿ 7 ಗಂಟೆಗೆ ಶ್ರೀದೇವಿಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಧರಿಸಿ ದಿವ್ಯಪ್ರಬಂಧ ಪಾರಾಯಣ ಮತ್ತು ಮಂಗಳವಾದ್ಯದೊಂದಿಗೆ ಉತ್ಸವ ನೆರವೇರಿಸಲಾಗುತ್ತದೆ.

ಕಲ್ಯಾಣೋತ್ಸವದಿಂದ ಆರಂಭವಾಗುವ ವೈರಮುಡಿ ಜಾತ್ರಾಮಹೋತ್ಸವ ಮಹಾಭಿಷೇಕದೊಂದಿಗೆ ಮುಕ್ತಾಯವಾದರೆ, ಆಷಾಢಮಾಸದ ಕೃಷ್ಣರಾಜಮುಡಿ ಜಾತ್ರಾಮಹೋತ್ಸವ ಮಹಾಭಿಷೇಕದೊಂದಿಗೆ ಆರಂಭವಾಗಿ, ಪುಷ್ಪಯಾಗದೊಂದಿಗೆ ಸಂಪನ್ನವಾಗಲಿದೆ. ಬೆರಳೆಣಿಕೆ ಭಕ್ತರು ಮಾತ್ರ ಭಾಗವಹಿಸುವ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಮಹಾರಾಜರ ಹೆಸರಲ್ಲಿ ಹತ್ತು ದಿನಗಳ ಕಾಲ ನಡೆಯುವ ಕರ್ನಾಟಕದ ಏಕೈಕ ಜಾತ್ರಾ ಮಹೋತ್ಸವವಾಗಿದೆ.

ಜು.15ರ ಮುಮ್ಮುಡಿ ಕೃಷ್ಣರಾಜ ಒಡೆಯರ್​ ವರ್ಧಂತಿ ನಿಮಿತ್ತ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ ನಡೆಸಲಾಗುತ್ತದೆ. ಸಂಜೆ ಅಮ್ಮನವರ ಸನ್ನಿಧಿಯ ಸಭಾಂಗಣದಲ್ಲಿ ಉತ್ಸವಮೂರ್ತಿ ಚೆಲುವನಾರಾಯಣಸ್ವಾಮಿ ಮತ್ತು ಕಲ್ಯಾಣನಾಯಕಿ ಅಮ್ಮನವರಿಗೆ ಕಲ್ಯಾಣೋತ್ಸವ ನೆರವೇರಲಿದೆ. ಇದೇ ದಿನ ರಕ್ಷಾಬಂಧನ ಮತ್ತು ಧ್ವಜಪ್ರತಿಷ್ಠೆ ಜರುಗಲಿದೆ. ಜು.16ರ ಬೆಳಗ್ಗೆ ಧ್ವಜಾರೋಹಣ, 18ರಂದು ಸಂಜೆ ನಾಗವಲ್ಲಿ ಮಹೋತ್ಸವ ನರಂದಾಳಿಕಾರೋಹಣ, 21 ರಂದು ಸಂಜೆ ಗಜೇಂದ್ರಮೋಕ್ಷ, 22ರಂದು ಬೆಳಗ್ಗೆ ರಥೋತ್ಸವ, 24ರಂದು ಅವಭೃತ, ಪಟ್ಟಾಭಿಷೇಕ, ಪಡಿಮಾಲೆ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net