

ರಾಮನಗರ: ಮೇಕೆದಾಟು ಪಾದಯಾತ್ರೆ ಹೋರಾಟ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಐವರು ನಾಯಕರು ಮಾತ್ರವೇ ಪಾದಯಾತ್ರೆ ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇಕೆದಾಟು ಪಾದಯಾತ್ರೆಯ 5ನೇ ದಿನವಾದ ಇಂದು ಬಿಡದಿಯಲ್ಲಿ 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಈ ಊಟದ ವ್ಯವಸ್ಥೆಯನ್ನು ರದ್ದುಗೊಳಿಸಿದ್ದಾರೆ. ಆದರೆ, ಪಾದಯಾತ್ರೆ ನಡೆಯಲಿ ಬಿಡಲಿ, ಬಂದವರು ಹಸಿವಿನಿಂದ ಹೋಗಬಾರದು ಎಂದು ಮಾಯಗಾನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಿಲ್ಲಾಡಳಿತ ಪಾದಯಾತ್ರೆ ಮೇಲೆ ನಿಷೇಧ ಏರಿದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸೇರದಂತೆ ಐದು ಮಂದಿಯಷ್ಟೇ ಪಾದಯಾತ್ರೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಇನ್ನೂ ಕನಕಪುರದ ತಮ್ಮ ನಿವಾಸದಲ್ಲಿದ್ದಾರೆ. ಇನ್ನೊಂದೆಡೆ ರಾಮನಗರದ ಐಜೂರು ವೃತ್ತದಲ್ಲಿ ಪೊಲೀಸರ ಕಾವಲಿನಲ್ಲಿ ಪಾದಯಾತ್ರೆಗೆ ಅಂತಿಮ ಸಿದ್ಧತೆ ನಡೆಯುತ್ತಿದೆ.
ಪಾದಯಾತ್ರೆಗೆ ಪಣ ತೊಟ್ಟಿರುವ ಡಿಕೆಶಿ, ಒಂದುವೇಳೆ ತೊಡಕುಉಂಟಾದರೆ ಕೇವಲ 5 ಮಂದಿ ಅಂತರ ಕಾಪಾಡಿಕೊಂಡು ನಡೆಯೋಣ. ಕೋವಿಡ್ ನಿಯಮ ಪಾಲಿಸಿ ನಡೆಯೋಣ. ಹೀಗೆ ಮಾಡಿದರೆ ಅವರು ನಮ್ಮನ್ನ ತಡೆಯಲು ಸಾಧ್ಯವಿಲ್ಲ ಎಂದು ಡಿಕೆಶಿ ಹೇಳುತ್ತಿದ್ದಾರೆ ಎನ್ನಲಾಗಿದೆ.
ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಐದನೇ ದಿನ ಪಾದಯಾತ್ರೆ ಹೈಕೋರ್ಟ್, ಜಿಲ್ಲಾಡಳಿತ, ಸರ್ಕಾರ ಹಾಗೂ ಕಾಂಗ್ರೆಸ್ನ ಪ್ರತಿಷ್ಠೆಯ ನಡುವೆ ಏನೆಲ್ಲಾ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.