ಅವರ ಮನೆಯಲ್ಲಿ ಎಮ್ಮೆ ಸತ್ತಿದ್ದಕ್ಕೆ ಇವರ ಮನೆಯಲ್ಲಿ 6 ವರ್ಷದ ಬಾಲಕನ ಹೆಣ ಬಿತ್ತು!

buffalo
Published on

ಮುಂಬೈ: ಮನೆಯಲ್ಲಿ ಸಾಕಿದ್ದ ಎಮ್ಮೆ ಸತ್ತಿದ್ದಕ್ಕೆ ಮತ್ತೊಂದು ಮನೆಯ ಆರು ವರ್ಷದ ಬಾಲಕನನ್ನೇ ಹೊಡೆದು ಕೊಂದು ಹಾಕಿದ ಘಟನೆ ಮುಂಬೈನ ಬೀಡ್​ ಜಿಲ್ಲೆಯಲ್ಲಿ ನಡೆದಿದೆ. ಮಾಟ ಮಂತ್ರದ ಭಯದಿಂದಲೇ ಈ ಕೆಲಸ ಮಾಡಿರುವುದಾಗಿ ಹೇಳಲಾಗಿದೆ.

ಜಿಲ್ಲೆಯ ರತ್ನಗಿರಿ ಗ್ರಾಮದ ದಂಪತಿ ಮನೆಯಲ್ಲಿ ಎಮ್ಮೆ ಸಾಕಿದ್ದರಂತೆ. ಆದರೆ ಆ ಎಮ್ಮೆ ಯಾವುದೋ ಖಾಯಿಲೆಯಿಂದಾಗಿ ಇತ್ತೀಚೆಗೆ ಸಾವನ್ನಪ್ಪಿದೆ. ಎಮ್ಮೆಗೆ ಯಾರೋ ಮಾಟ ಮಂತ್ರ ಮಾಡಿದ್ದರಿಂದಲೇ ಅದು ಸಾವನ್ನಪ್ಪಿದೆ ಎಂದು ದಂಪತಿ ಭಾವಿಸಿದ್ದಾರೆ. ಗ್ರಾಮದಲ್ಲಿದ್ದ ಇನ್ನೊಂದು ಕುಟುಂಬಕ್ಕೆ ನಮ್ಮನ್ನು ಕಂಡರೆ ಆಗುವುದಿಲ್ಲ ಎಂದು ಭಾವಿಸಿದ್ದ ದಂಪತಿ ಅದೇ ಕುಟುಂಬ ಮಾಟ ಮಂತ್ರ ಮಾಡಿದೆ ಎಂದುಕೊಂಡಿದೆ. ಆ ಕುಟುಂಬದ ಮೇಲೆ ದ್ವೇಷ ತೀರಿಸಿಕೊಳ್ಳಲು ಮುಂದಾಗಿದೆ.

ಬುಧವಾರದಂದು ಆರು ವರ್ಷದ ಬಾಲಕ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಯಾರಿಗೂ ಗೊತ್ತಾಗದಂತೆ ಆ ಬಾಲಕನನ್ನು ಅಪಹರಿಸಲಾಗಿದೆ. ನಂತರ ಬಾಲಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ, ನಿರ್ಜನ ಪ್ರದೇಶದಲ್ಲಿ ಹೆಣ ಎಸೆದು ಬರಲಾಗಿದೆ. ಬಾಲಕನ ಶವ ಸಿಕ್ಕ ನಂತರ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರಿಗೆ ದಂಪತಿಯ ಮೇಲೆ ಅನುಮಾನ ಬಂದಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆಗ ದಂಪತಿ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net