ವರದಕ್ಷಿಣೆ ಕಿರುಕುಳ: ಮದ್ವೆಯಾದ 5 ತಿಂಗಳಿಗೆ ದುರಂತ ಅಂತ್ಯಕಂಡ 20ರ ಯುವತಿ!

dowry case
Published on

ಹಾಸನ: ಆಕೆಯ ವಯಸ್ಸಿನ್ನು 20. ಆತನ ವಯಸ್ಸು 25. ನೋಡೋಕೆ ಮುದ್ದು ಮುದ್ದಾಗಿದ್ದ ಈ ಜೋಡಿ ಪ್ರೀತಿಯ ಬಲೆಗೆ ಸಿಲುಕಿ ಮನೆಯವರ ವಿರೋಧದ ನಡುವೆಯೂ ಮದುವೆ ಮಾಡಿಕೊಂಡಿತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ 5 ತಿಂಗಳಿಗೆ ಇವರಿಬ್ಬರ ಪ್ರೀತಿ ದುರಂತ ಅಂತ್ಯಕಂಡಿದ್ದು, ಯುವತಿ ಬಾರದ ಲೋಕಕ್ಕೆ ಹೋಗಿದ್ದಾಳೆ.

ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ(20) ಮೃತ ದುರ್ದೈವಿ. ಸಕಲೇಶಪುರದ ಅಶ್ವಥ್ ಮತ್ತು ಪೂಜಾ ಪರಸ್ಪರ ಪ್ರೀತಿಸುತ್ತಿದ್ದರು. 5 ತಿಂಗಳ ಹಿಂದೆ ಈ ವಿಚಾರ ತಿಳಿದ ಪಾಲಕರು ಇವರಿಬ್ಬರ ಪ್ರೀತಿಗೆ ವಿರೋಧಿಸಿ ಪೂಜಾಳಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ನೆರವೇರಿಸಿದ್ದರು. ಇದಾದ 20 ದಿನಕ್ಕೆ ಮನೆಯವರ ವಿರೋಧದ ನಡುವೆಯೂ ಪೂಜಾ, ತನ್ನ ಪ್ರಿಯಕರ ಅಶ್ವಥ್ ಜತೆ ಮದುವೆ ಆಗಿದ್ದಳು.

ದಂಪತಿ ಇಬ್ಬರೂ ಸಕಲೇಶಪುರ ಪಟ್ಟಣದಲ್ಲಿ ವಾಸವಿದ್ದರು. ಇಂದು(ಗುರುವಾರ) ಸಕಲೇಶಪುರದಲ್ಲಿ ಹೇಮಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಪೂಜಾ ಪ್ರಾಣ ಬಿಟ್ಟಿದ್ದಾಳೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೂಜಾಳ ಪಾಲಕರು, ನನ್ನ ಮಗಳಿಗೆ ಗಂಡನ ಮನೆಯಲ್ಲಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು. ಆಕೆಯ ಗಂಡನ ಮನೆಯವರ ಕಿರುಕುಳ ಸಹಿಸಲಾಗದೆ ಮಗಳು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net