ಕೆಡಿಪಿ ಸಭೆಗೆ ತಡವಾಗಿ ಬಂದವರಿಗೆ ಪಾಠ

17HNL1
Published on

ಹಾನಗಲ್ಲ: ಸಮಯ ಪಾಲಿಸದ ಕೆಲ ಅಧಿಕಾರಿಗಳ ಮೇಲೆ ಗರಂ ಆದ ಶಾಸಕ ಶ್ರೀನಿವಾಸ ಮಾನೆ ಅವರು ಶಿಸ್ತಿನ ಕುರಿತಾಗಿ ಪಟ್ಟಣದ ತಾಪಂ ಕಚೇರಿಯಲ್ಲಿ ಪಾಠ ಮಾಡಿದರು. ನಿಗದಿತ ಸಮಯಕ್ಕೆ ಬಾರದ ಅಧಿಕಾರಿಗಳು ಸಭಾಂಗಣದ ಹೊರಗೆ ಕಾದು ನಿಲ್ಲುವಂತಾಯಿತು.

ಸೋಮವಾರ ಬೆಳಗ್ಗೆ 10 ಗಂಟೆಗೆ ತ್ರೈಮಾಸಿಕ ಕೆಡಿಪಿ ಸಭೆ ನಿಗದಿಯಾಗಿತ್ತು. 9.50ರ ಹೊತ್ತಿಗೆ ತಾಪಂ ಸಭಾಂಗಣ ಪ್ರವೇಶಿಸಿದ ಶ್ರೀನಿವಾಸ ಮಾನೆ, ಸರಿಯಾಗಿ 10 ಗಂಟೆಗೆ ಸಭೆ ಆರಂಭಿಸಿದರು. ಮೊದಲಿಗೆ ಕೃಷಿ ಇಲಾಖೆ ಅಧಿಕಾರಿಗೆ ವರದಿ ಸಲ್ಲಿಸಲು ಆಹ್ವಾನಿಸಿದರು. ಆದರೆ, ಅಧಿಕಾರಿ ಇನ್ನೂ ಬಂದಿರಲಿಲ್ಲ. ಸಿಡಿಮಿಡಿಗೊಂಡ ಮಾನೆ, ‘ಇನ್ನು ಮೇಲೆ ಬರುವ ಯಾವ ಅಧಿಕಾರಿಗಳನ್ನೂ ಒಳಗೆ ಬಿಡಬೇಡಿ’ ಎಂದು ಸೂಚಿಸಿದರು.

ಕೆಲ ಹೊತ್ತಿನ ಬಳಿಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಕಡ್ಲೇರ ಸೇರಿದಂತೆ ಹಲವು ಅಧಿಕಾರಿಗಳು ಬಂದರೂ ಭಾಗವಹಿಸಲು ಅವಕಾಶ ನೀಡದೇ ಮುಂದಿನ ಸಭೆಗೆ ಬನ್ನಿ ಎಂದು ಹೇಳಿದರು.

ಶಂಕರಿಕೊಪ್ಪದ ಕೆರೆ ಸರ್ವೆ ಕಾರ್ಯ ವಿಳಂಬದ ಕುರಿತು ಸರ್ವೆ ಇಲಾಖೆ ಮೇಲ್ವಿಚಾರಕ ಧನಂಜಯ ಸಮಜಾಯಿಷಿ ನೀಡಿ, ಬೆಳೆಗಳು ಇರುವುದರಿಂದ ಸರ್ವೆ ಮಾಡಲು ಸಾಧ್ಯವಾಗಿಲ್ಲ ಎಂದರು. ಕೆರೆಗಳು ಸರ್ಕಾರದ ಆಸ್ತಿ. ಒತ್ತುವರಿ ಮಾಡಿದರೂ ಮೌನ ವಹಿಸಿದ್ದೀರಿ. ಅಲ್ಲದೆ, ವಾರದೊಳಗೆ ಸರ್ವೆ ಮುಗಿಸಿ, ಇಲ್ಲವೇ ಕ್ರಮ ಎದುರಿಸಿ ಎಂದು ಎಚ್ಚರಿಸಿದರು.

ಕುಂಟುನೆಪ ಹೇಳಿ ರೋಗಿಗಳನ್ನು ಬೇರೆಡೆ ಕಳಿಸುವುದು ನಿಲ್ಲಬೇಕು. ಹಾಗೇನಾದರೂ ಇದ್ದರೆ ಲಿಖಿತವಾಗಿ ಪತ್ರ ನೀಡಿ ಎಂದು ಟಿಎಚ್​ಒ ಡಾ.ಕೆ.ಜೆ. ಲಿಂಗರಾಜ ಅವರಿಗೆ ಸೂಚಿಸಿದರು. ತಾಲೂಕಿನ ಬೈಲವಾಳ, ಆರೆಗೊಪ್ಪ ಮತ್ತಿತರ ಗ್ರಾಮಸ್ಥರು ಪಡಿತರಕ್ಕೆ ಐದಾರು ಕಿ.ಮೀ. ದೂರ ತೆರಳಬೇಕಾಗಿದೆ. ಎಲ್ಲೆಲ್ಲಿ ತೊಂದರೆ ಇದೆ ಎಂಬುದರ ವರದಿ ನೀಡಿ. ಪಡಿತರ ಅಕ್ಕಿಯ ಅಕ್ರಮ ಸಾಗಾಣಿಕೆಗೆ ಕಡಿವಾಣ ಹಾಕಿ ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ತಾಪಂ ಇಒ ಬಿ. ಸುನೀಲಕುಮಾರ, ಅಕ್ಕಿಆಲೂರಿನ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹನುಮಂತಪ್ಪ ಗೊಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net