ಕ್ರಿಕೆಟ್​ ಆಟಗಾರ್ತಿ ವೇದಾಕೃಷ್ಣಮೂರ್ತಿ ತಾಯಿ ಕರೊನಾಗೆ ಬಲಿ

vedakrishna murthy mother
Published on

ಚಿಕ್ಕಮಗಳೂರು: ಮಹಾಮಾರಿ ಕರೊನಾ ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಇದೀಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ(63) ಕೋವಿಡ್​ಗೆ ಬಲಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲಕ ಚೆಲುವಾಂಬ ಅವರು ಅನಾರೋಗ್ಯದ ಹಿನ್ನೆಲೆ ಏ.20ರಂದು ಆಸ್ಪತ್ರೆ ದಾಖಲಾಗಿದ್ದರು. ಆಗ ಕರೊನಾ ಟೆಸ್ಟ್​ ಮಾಡಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿತ್ತು. ನಾಲ್ಕು ದಿನದಿಂದ ಹೋಂ ಐಸೋಲೇಷನ್‍ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಕಡೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸಲಿಲ್ಲ.

ಕಳೆದ ಜನವರಿಯಲ್ಲಿ ಚೆಲುವಾಂಬ ತನ್ನ ಪತಿ ಹಾಗೂ ಮಗಳು ವೇದಾಕೃಷ್ಣಮೂರ್ತಿ ಜತೆ 63ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೀಗ ಕೋವಿಡ್​ಗೆ ಬಲಿಯಾಗಿದ್ದು, ಕುಟುಂಬಸ್ಥರನ್ನ ದುಃಖಕ್ಕೆ ದೂಡಿದೆ. ಕಡೂರು ತಾಲೂಕಿನ ಬೀರೂರು ರಸ್ತೆ ಬಳಿಯಿ ಇರುವ ವೇದಾ ಕೃಷ್ಣಮೂರ್ತಿ ಅವರ ಜಮೀನಿನಲ್ಲಿ ಕೋವಿಡ್​ ಮಾರ್ಗ ಸೂಚಿಯಂತೆಯೇ ತಾಲೂಕು ಆಡಳಿತ ವತಿಯಿಂದ ಮೃತರ ಅಂತ್ಯಸಂಸ್ಕಾರ ನೆರವೇರಿದೆ.

ಚೆಲುವಾಂಬ ಪತಿ ಕೃಷ್ಣಮೂರ್ತಿ ನಿವೃತ್ತ ಸೈನಿಕ. ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net