ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಈದ್ ಮಿಲಾದ್ ಪ್ರಯುಕ್ತ ಉಳ್ಳಾಲ ಕೇಂದ್ರ ಜುಮಾ ಮಸೀದಿ ಹಾಗೂ ಹಝ್ರತ್ ಸಯ್ಯಿದ್ ಮದನಿ ದರ್ಗಾ ವತಿಯಿಂದ ಬೃಹತ್ ಸ್ವಲಾತ್ ಕಾಲ್ನಡಿಗೆ ಮೆರವಣಿಗೆ ಸೆ.16ರಂದು ನಡೆಯಲಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ತಿಳಿಸಿದರು.
ಬೆಳಗ್ಗೆ 7.30ಕ್ಕೆ ಕೋಟೆಪುರ ಮಸೀದಿಯಿಂದ ಮೆರವಣಿಗೆ ಆರಂಭಗೊಂಡು ಮುಕ್ಕಚ್ಚೇರಿ, ಅಝಾದ್‌ನಗರ ರಸ್ತೆಯಾಗಿ ಉಳ್ಳಾಲ ದರ್ಗಾಕ್ಕೆ ತಲುಪಲಿದೆ. ಈ ಮೆರವಣಿಗೆಯಲ್ಲಿ ಹಸಿರು ಪತಾಕೆ ಹೊರತುಪಡಿಸಿ ಇತರ ಯಾವುದೇ ಧ್ವಜ ಬಳಕೆಗೆ ಅವಕಾಶ ಇರುವುದಿಲ್ಲ. ಅಹ್ಲುಸುನ್ನತ್ ವಲ್ ಜಮಾಅತ್‌ಗೆ ಸಂಬಂಧಪಡದ ಕರಪತ್ರ, ಭಿತ್ತಿಪತ್ರ ಪ್ರದರ್ಶನ, ಅನಗತ್ಯ ಘೋಷಣೆಗಳನ್ನು ನಿರ್ಬಂಧಿಸಲಾಗಿದೆ. ಬೈಕ್ ರ‌್ಯಾಲಿ, ಅಸಭ್ಯ ವರ್ತನೆ, ಅಸಭ್ಯ ರೀತಿಯ ವಸ್ತ್ರ ಧರಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಮಿಲಾದ್ ಜಾಥಾ ನಡೆಸಲಾಗುವುದು. ಜಮಾಅತ್‌ನ ಹೊರಗಿನಿಂದ ಮಿಲಾದ್ ಜಾಥಾ ಮೂಲಕ ಬರುವವರು ಶಿಸ್ತು ಕಾಪಾಡಬೇಕು. ಅಶಿಸ್ತಿನಿಂದ ವರ್ತಿಸಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು. ಈ ಬಗ್ಗೆ ಆಯಾ ಜಮಾಅತ್‌ಗಳಿಗೆ ಪತ್ರ ಮೂಲಕ ಸೂಚನೆ ನೀಡಲಾಗಿದೆ ಎಂದರು.
ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ರೈಟ್‌ವೇ, ಕೋಶಾಧಿಕಾರಿ ನಾಝಿಮ್ ಮುಕ್ಕಚ್ಚೇರಿ ಸುದ್ದಿಗೋಷ್ಠಿಯಲ್ಲಿದ್ದರು.