

ಹೊಸೂರು (ತಮಿಳುನಾಡು): 3 ದಿನದ ಹಿಂದೆ ಬಸ್ ನಿಲ್ದಾಣದಲ್ಲಿದ್ದ ಕೋತಿಯೊಂದಕ್ಕೆ ಆಟೋ ಡ್ರೈವರ್ವೊಬ್ಬರು ತಿನ್ನಲು ಬಾಳೆಹಣ್ಣು ಕೊಟ್ಟರು. ಹಣ್ಣು ತಿಂದ ಕೋತಿ ಸುಮ್ಮನಿರಬೇಕು ತಾನೇ... ಆದ್ರೆ ಆ ಡ್ರೈವರ್ನ ಹೆಗೇಲಿರಿದೆ. ಎಲ್ಲೇ ಹೋದ್ರೂ ಹಿಂಬಾಲಿಸುತ್ತೆ, ಮನೆಗೇ ಹುಡುಕಿಕೊಂಡು ಬರುತ್ತೆ...
ಹೊಸೂರು ನಗರದ ಡೆಂಕಣಿಕೋಟೆ ಬಸ್ ನಿಲ್ದಾಣದಲ್ಲಿ ಕೋತಿಯೊಂದಕ್ಕೆ ದೇವರೆಡ್ಡಿಪಾಳ್ಯಂ ನಿವಾಸಿ ರವಿ ಎಂಬುವರು ಶುಕ್ರವಾರ ಬಾಳೆಹಣ್ಣು ಕೊಟ್ಟಿದ್ದರು. ಆಗಿನಿಂದ ಆ ಕೋತಿ ಅವರ ಹೆಗಲ ಮೇಲೆ ಕುಳಿತಿದ್ದು, ಆಟೋ ಓಡಿಸಲು ಬಿಡದೆ ತೊಂದರೆ ಕೊಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಅವರು ಕೋತಿಯನ್ನು ವಶಕ್ಕೆ ಪಡೆದು, ಕಣ್ತಪ್ಪಿಸಿ ಹೋಗುವಂತೆ ಹೇಳಿದ್ದರು. ರವಿ ಹೋದ ಬಳಿಕ ಅಧಿಕಾರಿಗಳು ಕೋತಿಯನ್ನು ಬಿಟ್ಟಿದ್ದರು. ಆದರೀಗ ಆ ಕೋತಿ ರವಿ ಅವರ ಮನೆಗೇ ಹೋಗಿ ಅಲ್ಲೇ ಆಶ್ರಯ ಪಡೆದಿದೆ. ಕೋತಿಯ ಕಿರಿಕಿರಿಗೆ ರವಿ ಹೈರಾಣಾಗಿದ್ದಾರೆ.