

ಬೆಂಗಳೂರು: 2023ಕ್ಕೆ ನಮ್ಮನ್ನು ಬಿಟ್ಟು ಯಾರೂ ಏನೂ ಮಾಡಲು ಆಗುವುದಿಲ್ಲ ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೇ ಕಿಂಗ್ ಮೇಕರ್ ಎಂದು ಪರೋಕ್ಷವಾಗಿ ಹೇಳಿದರು.
ಜೆ.ಪಿ.ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಬೇರೆ ಪಕ್ಷಗಳಿಂದ ವಲಸೆ ಬರುತ್ತಿದ್ದಾರೆ. ಪಟ್ಟಿಗಳನ್ನು ಇಟ್ಕೊಂಡಿದ್ದೇವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್ನಿಂದ ಶಾಸಕರು ಬರುತ್ತಿದ್ದಾರೆ ಎಂದಿದ್ದಾರೆ. ಅತ್ತ ಬಿಜೆಪಿ ಅವರು ಕಾಂಗ್ರೆಸ್ ಶಾಸಕರು ತಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುತ್ತಿದ್ದಾರೆ. ಜೆಡಿಎಸ್ ಅನ್ನು ಬಿಜೆಪಿ ಬಾಲಂಗೋಚಿ ಅಂದಿದ್ದಾರೆ. ತುಮಕೂರಿನಿಂದ ಜೆಡಿಎಸ್ ಒದ್ದು ಓಡಿಸಿ ಎಂದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರಿಗೂ ನಾನು ಕೇಳ್ತೇನೆ. ಯಾರ್ಯಾರು ಇದ್ದಾರೆ ಅನ್ನೋದನ್ನ ಹೇಳಲಿ. ಯಾರು ಹೋಗಬಹುದೆಂಬ ಮಾಹಿತಿ ನಮಗೂ ಗೊತ್ತಿದೆ. ಅದರಿಂದ ನನಗೇನು ಗಾಬರಿ ಇಲ್ಲ ಎಂದರು.
ನಮ್ಮ ಪಕ್ಷಕ್ಕೂ ಬಿಜೆಪಿ ಮತ್ತು ಕಾಂಗ್ರೆಸ್ನ ಕೆಲವರು ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ನಮಗೆ ಬರುವವರು ಸಣ್ಣ ಮುಖಂಡರು ಎಂದರು. ರಮೇಶ್ ಜಾರಕಿಹೊಳಿ 16 ಮಂದಿಯನ್ನು ರೆಡಿ ಮಾಡಿದ್ದೇವೆ ಎಂದಿದ್ದಾರೆ. ಜೆಡಿಎಸ್ಗೆ ನಾವು ಕೈಹಾಕಲ್ಲ ಎಂದಿದ್ದಾರೆ. ಅಷ್ಟಾದ್ರೂ ಅವರು ನಮಗೆ ಗೌರವ ಕೊಟ್ಟಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಎಚ್ಡಿಕೆ ಉತ್ತರಿಸಿದರು. ಮುಂದಿನ ಚುನಾವಣೆಗೆ ನಮ್ಮ ಶ್ರಮ ಏನು ಅಂತ ಗೊತ್ತಾಗುತ್ತದೆ. ನಮ್ಮ ಕಾರ್ಯಕರ್ತರು ಕೂಡ ಇದ್ದಾರೆ. ಕರೊನಾ ಕಾರಣ ಇನ್ನೂ ನಾನು ಹೊರಗಡೆ ಬಂದಿಲ್ಲ. ಕರೊನಾ ಕಡಿಮೆ ಆಗಲಿ ಆಗ ನಮ್ಮ ಹೋರಾಟ ಶುರುವಾಗುತ್ತದೆ. ಎಲ್ಲ ಪಕ್ಷಗಳು ಬಾಗಿಲು ತೆಗೆದು ಕೂತಿವೆ. ಇವತ್ತಿನ ರಾಜಕಾರಣದಲ್ಲಿ ನಿಷ್ಠೆ ಎನ್ನುವುದು ಇಲ್ಲ. ನಾನು ಹೊಸ ನಾಯಕತ್ವಕ್ಕೆ ರೆಡಿ ಇದ್ದೇನೆ ಎಂದರು.