ನಗುತ್ತಲೇ ಸೆಲ್ಫಿ ವಿಡಿಯೋ ಮಾಡಿ ನದಿಗೆ ಹಾರಿ ಯುವತಿ ಆತ್ಮಹತ್ಯೆ: ಸಾವಿನ ಹಿಂದಿರುವ ನೋವು ಬಿಚ್ಚಿಟ್ಟ ತಂದೆ!

Girl
Published on

ಅಹಮದಾಬಾದ್​: ಯುವತಿಯೊಬ್ಬಳು ಸೆಲ್ಫಿ ವಿಡಿಯೋ ಮಾಡಿ ಸಬರಮತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ ನಗರದಲ್ಲಿ ನಡೆದಿದೆ.

ಮೃತ ಯುವತಿಯನ್ನು ಆಯೇಷಾ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋ ರೆಕಾರ್ಡ್​ ಮಾಡಿ ನಗುತ್ತಲೇ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಯಾವಾಗ ವಿಡಿಯೋ ಪಾಲಕರಿಗೆ ತಲುಪಿದಾಗ ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನದಿಯ ಸುತ್ತ ರಕ್ಷಣಾ ತಂಡ ಶೋಧ ಕಾರ್ಯ ಕೈಗೊಂಡ ಬಳಿಕ ಮೃತದೇಹ ಪತ್ತೆಯಾಗಿದ್ದು, ಶವಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಆಯೇಷಾ ತಂದೆ ಲಿಯಾಖತ್​ ಅಲಿ ಬ್ಯಾಂಕ್​ ಉದ್ಯೋಗಿ. ಮಗಳ ಬಗ್ಗೆ ಮಾತನಾಡಿರುವ ಅಲಿ, 2018ರಲ್ಲಿ ರಾಜಸ್ಥಾನ ಜಲೋರ್​ ನಿವಾಸಿ ಆರೀಫ್​ ಖಾನ್ ಜತೆ​ ಆಯೇಷಾಗೆ ಮದುವೆ ಮಾಡಿದೆವು. ಮದುವೆಯಾದ ಕೆಲವೇ ದಿನಗಳಲ್ಲಿ ಆರೀಫ್​ ಕುಟುಂಬ ವರದಕ್ಷಿಣೆಗಾಗಿ ಆಯೇಷಾಗೆ ಕಿರುಕುಳ ನೀಡಲು ಆರಂಭಿಸಿತು. ಹೀಗಿರುವಾಗ 2019ರಲ್ಲಿ ಮಗಳನ್ನು ಮನೆಗೆ ಕರೆತಂದ ಆರೀಫ್​, ಹಣ ನೀಡುವವರೆಗೂ ಮರಳಿ ಕರೆದೊಯ್ಯುವುದಿಲ್ಲ ಎಂದನು. ಆರೀಫ್​ ಇಟ್ಟಿದ್ದ 1.5 ಲಕ್ಷ ರೂ. ಹಣವನ್ನು ಆಯೇಷಾ ಕುಟುಂಬ ನೀಡಿದ ಬಳಿಕ ಆಕೆಯನ್ನು ತನ್ನ ಜತೆಯಲ್ಲಿ ಆರೀಫ್​ ಕರೆದೊಯ್ದನು ಎಂದು ಅಲಿ ಮಾಹಿತಿ ನೀಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಆರೀಫ್​ ಮತ್ತೆ ಹಣಕ್ಕಾಗಿ ಬೇಡಿಕೆ ಇಡಲು ಶುರು ಮಾಡಿದನು. ಮತ್ತೆ ಆಯೇಷಾಳನ್ನು ತವರಿಗೆ ಕರೆತಂದು ಬಿಟ್ಟನು. ಅಲ್ಲದೆ, ಆಕೆಯೊಂದಿಗೆ ಫೋನ್​ನಲ್ಲಿ ಮಾತನಾಡುವುದನ್ನು ಸಹ ನಿಲ್ಲಿಸಿದನು. ಇದರಿಂದ ಆಯೇಷಾ ತೀವ್ರವಾಗಿ ನೊಂದಿದ್ದಳು. ಕೆಲವು ದಿನಗಳ ಹಿಂದೆ ಆರೀಫ್​ಗೆ ಕರೆ ಮಾಡಿದ್ದ ಆಯೇಷಾ ತನ್ನನ್ನು ಕರೆದೊಯ್ಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಆದರೆ, ಇದಕ್ಕೆ ಆರೀಫ್​ ಕ್ಯಾರೆ ಎನ್ನಲಿಲ್ಲ. ನೀನು ಸಾಯಬೇಕೆಂದುಕೊಂಡಿದ್ದರೆ ಸಾಯಿ ಅದರಿಂದ ನನಗೇನು ಇಲ್ಲವೆಂದಿದ್ದ. ಇದರಿಂದ ಮತ್ತಷ್ಟು ಘಾಸಿಗೊಂಡ ಆಯೇಷಾ ಈ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆಂದು ತಂದೆ ಅಲಿ ಆರೋಪಿಸಿದ್ದಾರೆ.

ಬೇಸರದಲ್ಲಿದ್ದ ಮಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಆಗಾಗ ಆಕೆಯನ್ನು ಹುರಿದುಂಬಿಸುತ್ತಿದ್ದೆ. ಆದರೆ, ನನ್ನ ಪ್ರಯತ್ನ ಕೊನೆಗೂ ವಿಫಲವಾಯಿತು ಎಂದು ನೊಂದುಕೊಂಡ ಅಲಿ, ತನ್ನ ಮಗಳ ಸಾವಿಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದರು. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net