ಹೊಸ ವರ್ಷಕ್ಕೆ ರಾಜಧಾನಿಯಲ್ಲಿ ಅದ್ದೂರಿ ಸ್ವಾಗತ! 2 ವರ್ಷದ ಬಳಿಕ ಮರುಕಳಿಸಿದ ಸಂಭ್ರಮ, 2022ಕ್ಕೆ ಬೈಬೈ- 2023ಕ್ಕೆ ಹಾಯ್​ಹಾಯ್​

new year banglore
Published on

ಬೆಂಗಳೂರು: ಎರಡು ವರ್ಷದ ಬಳಿಕ ಮರುಕಳಿಸಿದ ಹೊಸ ವರ್ಷಾಚರಣೆಯ ಸಂಭ್ರಮ ಮರುಕಳಿಸಿದ್ದು, ಸಿಲಿಕಾನ್​ ಸಿಟಿ ಬೆಂಗಳೂರು ಸೇರಿದಂತೆ ಹಲವೆಡೆ ಕಿಕ್ಕಿರಿದು ಸೇರಿದ್ದ ಜನರು ಹಾಡು, ಕುಣಿತ, ಮೋಜು-ಮಸ್ತಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡುವ ಮೂಲಕ 2023ನ್ನು ಸ್ವಾಗತಿಸಿದರು. 2022ಕ್ಕೆ ಬೈ ಬೈ ಹೇಳಿ 2023ಕ್ಕೆ ಹಾಯ್​ ಹಾಯ್​ ಅಂದರು.

ಎಂ.ಜಿ ರಸ್ತೆ, ಬ್ರಿಗೇಡ್​ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಯುವ ಸಮೂಹ ಸೇರಿದ್ದರು. ಕೆಲ ಯುವಕ-ಯುವತಿಯರು ಕಂಠಪೂರ್ತಿ ಕುಡಿದು ನಶೆಯಲ್ಲಿ ತೇಲಾಡುತ್ತಿದ್ದ ದೃಶ್ಯ ಕಂಡು ಬಂತು. ಝಗಮಗಿಸುತ್ತಿದ್ದ ವಿದ್ಯುತ್​ ದೀಪಾಂಲಕಾರ ಮತ್ತು ಮ್ಯೂಸಿಕ್​ ಹೊಸ ವರ್ಷಕ್ಕೆ ರಂಗಿನ ಕಿಕ್ಕೇರಿಸಿತ್ತು. ಕರೊನಾ ಆತಂಕದ ಹಿನ್ನೆಲೆಯಲ್ಲಿ 2020 ಮತ್ತು 2021 ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸವರ್ಷಾಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿತ್ತು. ಆದರೆ, ಈ ಬಾರಿ ಕೆಲವೊಂದು ಕಟ್ಟುನಿಟ್ಟಿನ ಸೂಚನೆಯೊಂದಿಗೆ ಹೊಸ ವರ್ಷಾಚರಣೆಗೆ ಅನುಮತಿಯನ್ನು ನೀಡಲಾಗಿತ್ತು.

ಪಾಶ್ಚಾತ್ಯ ಸಂಗೀತ, ಕಲರ್​ಫುಲ್​​ ಲೈಟಿಂಗ್​, ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕ-ಯುವತಿಯರು ಕುಣಿದು ಕುಪ್ಪಳಿಸಿ ರಾತ್ರಿ 12 ಗಂಟೆ ಆಗುತ್ತಿದ್ದಂತೆ "ಹ್ಯಾಪಿ ನ್ಯೂ ಇಯರ್​' ಎಂದು ಜೋರಾಗಿ ಕೂಗುತ್ತಾ, ತಮ್ಮ ಆಪ್ತರನ್ನು ತಬ್ಬಿಕೊಂಡು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡುತ್ತಾ 2023 ಅನ್ನು ಸ್ವಾಗತಿಸಿದರು. ದಾವಣಗೆರೆ, ಬೆಳಗಾವಿ, ಮೈಸೂರು, ಕೋಲಾರ, ತುಮಕೂರು... ಹೀಗೆ ಎಲ್ಲ ಕಡೆಯೂ ಹೊಸ ವರ್ಷಾಚರಣೆ ರಂಗೇರಿತ್ತು.

ಮೈಸೂರು ಅರಮನೆಯಲ್ಲೂ ಸಡಗರ ಸಂಭ್ರಮ ಮನೆಮಾಡಿತ್ತು. ಹೊಸ‌ ವರ್ಷವನ್ನ ಮೈಸೂರಿಗರು ಸಂಭ್ರದಿಂದ ಬರಮಾಡಿಕೊಂಡರು. ರಾತ್ರಿ 12 ಗಂಟೆ ಸರಿಯಾಗಿ ಅರಮನೆಯ ದೀಪಾಲಂಕರಕ್ಕೆ‌ ಚಾಲನೆ ನೀಡಲಾಯಿತು. 15 ನಿಮಿಷಗಳ ಕಾಲ‌ ಪಟಾಕಿ‌ ಸಿಡಿಸಿ ಸಂಭ್ರಮಿಸಿದರು. ಅರಮನೆ ಆವರಣದಲ್ಲಿ ಬಾಣಬಿರುಸು ಕಂಡು ಜನರು ಸಂತಸಗೊಂಡರು. ಬಹುತೇಕರು ಮನೆಯಲ್ಲಿ, ತಮ್ಮ ತಮ್ಮ ಏರಿಯಾಗಳಲ್ಲಿ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರ ಜತೆ ಕೇಕ್​ ಕತ್ತರಿಸಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net