

ಮೈಸೂರು: ಮೂರು ತಿಂಗಳು ಟೈಂ ಕೊಡಿ, ಇಲ್ಲಾಂದ್ರೆ ಫೈನಾನ್ಸ್ ಹೆಸರು ಬರೆದು ನಾವೆಲ್ಲ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾಯ್ತೀವಿ...
ಇದು ಖಾಸಗಿ ಫೈನಾನ್ಸ್ಗಳ ವಿರುದ್ಧ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಆಕ್ರೋಶ ಹೊರಹಾಕಿದ ಪರಿ. ಕರೊನಾ ಲಾಕ್ಡೌನ್ ಹಿನ್ನೆಲೆ ನಮ್ಮನ್ನು ಯಾರೂ ಕೂಲಿಗೆ ಕರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾಲದ ಹಣ ಕಟ್ಟುವುದಾದರೂ ಹೇಗೆ? ಸಮಯಾವಕಾಶ ಕೇಳಿದ್ರೂ ಖಾಸಗಿ ಫೈನಾನ್ಸ್ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಬೆಳ್ಳಂಬೆಳಗ್ಗೆ ಹಣ ಕಟ್ಟುವಂತೆ ನಮ್ಮ ಮನೆಯ ಬಾಗಿಲಿಗೆ ಬರುವ ಸಿಬ್ಬಂದಿ ಹಣ ಕಟ್ಟುವಂತೆ ಪೀಡಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆದ ಸ್ತ್ರೀಶಕ್ತಿ ಸಂಘದ ಮಹಿಳೆಯರು ಸದ್ಯಕ್ಕೆ ಹಣ ಕಟ್ಟಲು ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಲದ ಕಂತು ಕಟ್ಟಲು ಆಗುತ್ತಿಲ್ಲ. ಸ್ವಲ್ಪ ಸಮಯಾವಕಾಶ ಕೊಡಿ ಎಂದು ಬೇಡಿಕೊಂಡರೂ ಖಾಸಗಿ ಫೈನಾನ್ಸ್ ಸಿಬ್ಬಂದಿ ಸ್ಪಂದಿಸಿಲ್ಲವಂತೆ. ಸಿಬ್ಬಂದಿ ಕಿರುಕುಳಕ್ಕೆ ಮನನೊಂದ ದೇವನೂರು ಗ್ರಾಮದ ಸ್ತ್ರೀಶಕ್ತಿ ಸಂಘದ ಮಹಿಳೆಯರು, ತಹಸೀಲ್ದಾರ್ ಮತ್ತು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.