

ಮೈಸೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧಾ ಅವರ ತಾಯಿ ಟಿ.ಪುಷ್ಪಲತಾ(73) ನಿಧನರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಚಿಕ್ಕಹೊಸಳ್ಳಿ ಗ್ರಾಮದಲ್ಲಿ ಇಂದು(ಗುರುವಾರ) ಅಂತ್ಯಕ್ರಿಯೆ ನೆರವೇರಲಿದೆ.
ಮೈಸೂರಿನ ಕುರುಬಾರಹಳ್ಳಿ ವೃತ್ತದ ಸಮೀಪ "ಚಿಕ್ಕಿಯ ಮೂಗುತಿ'' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಬುಧವಾರ ಅದರಲ್ಲಿ ಭಾಗವಹಿಸಿದ್ದ ತಾರಾ ಅವರೊಂದಿಗೆ ಪುಷ್ಪಾಲತಾ ಅವರೂ ಇದ್ದರು. ಈ ವೇಳೆ ಪುಷ್ಪಲತಾ ಅವರಿಗೆ ತೀವ್ರವಾಗಿ ವಾಂತಿಯಾಗಿತ್ತು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಬಳಿಕ ಹೃದಯಾಘಾತವಾಗಿ ಕೊನೆಯುಸಿರೆಳೆದರು. ಬುಧವಾರ ರಾತ್ರಿ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಯಿತು. ಗುರುವಾರ ಬೆಳಗ್ಗೆ 10 ಗಂಟೆವರೆಗೂ ಜೆಪಿ ನಗರದ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, 10 ಗಂಟೆ ನಂತರ ಆನೇಕಲ್ಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತೆ. ಬಳಿಕ ಅಂತ್ಯಕ್ರಿಯೆ ನೆರವೇರಲಿದೆ. ತಾರಾ ಅವರ ಪುತ್ರನನ್ನು ನೋಡಿಕೊಳ್ಳಲೆಂದು ಪುಷ್ಟಲತಾ ಕೂಡ ಶೂಟಿಂಗ್ ಸ್ಥಳಕ್ಕೆ ಹೋಗುತ್ತಿದ್ದರು. ಅಂತೆಯೇ ಬುಧವಾರ ಬೆಳಗ್ಗೆ ಮೈಸೂರಿಗೆ ಬಂದಿದ್ದರು.
ಪುಷ್ಪಾಲತಾ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಚಿಕ್ಕಹೊಸಳ್ಳಿ ಗ್ರಾಮದವರು. ಅವರಿಗೆ ಪುತ್ರಿಯರಾದ ತಾರಾ, ಅನಿತಾ ಹಾಗೂ ಪುತ್ರ ಅನಿಲ್ಕುಮಾರ್ ಇದ್ದಾರೆ. 7 ವರ್ಷದ ಹಿಂದೆ ಪುಷ್ಪಾಲತಾ ಅವರ ಪತಿ ಮೃತಪಟ್ಟಿದ್ದರು. ಬಳಿಕ ತಾರಾ ಜತೆಯೇ ವಾಸವಿದ್ದರು. ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾರಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಕ್ಷಣವನ್ನು ಕಣ್ತುಂಬಿಕೊಂಡಿದ್ದರು.