

ಬಳ್ಳಾರಿ: ನಾನು ಮನಸ್ಸು ಮಾಡಿದ್ರೆ ಯಾವತ್ತಾದ್ರು ಒಂದು ದಿನ ಮುಖ್ಯಮಂತ್ರಿ ಆಗ್ತೀನಿ ಎಂದ ಮಾಜಿ ಸಚಿವ ಜನಾರ್ದನ ರೆಡ್ಡಿ, ಯಾರಿಗೂ ಕೊಡಲಾರದಷ್ಟು ಕಷ್ಟವನ್ನ ಕೆಲವರು ನನಗೆ ಕೊಟ್ಟಿದ್ದಾರೆ. ‘‘ರೆಡ್ಡಿಯವರೇ ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ’’ ನನ್ನನ್ನು ಬಂಧಿಸಲು ಬಂದಿ ಸಿಬಿಐ ಅಧಿಕಾರಿಗಳೇ ನನಗೆ ಹೇಳಿದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಶಾಸಕ ಸೋಮಶೇಖರ ರೆಡ್ಡಿ ಜನ್ಮದಿನಕ್ಕೆಂದು ಆಗಮಿಸಿದ್ದ ಜನಾರ್ದನ ರೆಡ್ಡಿ, ನಗರದಲ್ಲಿ ಮಂಗಳವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು. ರೆಡ್ಡಿ ಸಹೋದರರಿಗಾಗಲಿ, ಶ್ರೀರಾಮುಲುಗಾಗಲಿ ಇಂದು ದುಡ್ಡಿನ ಅವಶ್ಯಕತೆ ಇಲ್ಲ. ನನಗೆ ಶಾಸಕ, ಸಚಿವ, ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯಿಲ್ಲ. ಆದರೆ, ನಾನು ಮನಸ್ಸು ಮಾಡಿದ್ರೆ ಸಿಎಂ ಆಗುವೆ ಎಂದು ಪುನರುಚ್ಚರಿಸಿದರು.
ಲೋಕಸಭಾ ಸದಸ್ಯರಾಗಿ ಕರುಣಾಕರ ರೆಡ್ಡಿ ಕೆಲಸ ಮಾಡಿದರು. ಸೋಮಶೇಖರರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದರು. ಸಚಿವನಾಗಿದ್ದ ನನಗೆ ಕೊಡಬಾರದಷ್ಟು ಕಷ್ಟ ಕೊಟ್ಟರು. ಆದರೂ ಇಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಅಂತಹ ವಿಶೇಷ ಆಶೀರ್ವಾದ ಶ್ರೀ ಕನಕದುರ್ಗಮ್ಮ ದೇವಿ ನನಗೆ ನೀಡಿದ್ದಾಳೆ. ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಎದುರಿಸಲು ಆಗುತ್ತಿರಲಿಲ್ಲ. ನನ್ನನ್ನು ಬಂಧನ ಮಾಡಲು ಬಂದಿದ್ದ ಸಿಬಿಐ ಅಧಿಕಾರಿಗಳೇ ಖುದ್ದು, ‘‘ರೆಡ್ಡಿಯವರೇ ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ. ಆದರೆ, ಬಳ್ಳಾರಿಯ ಜನರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ'' ಎಂದಿದ್ದರು ಎಂದು ಮಾಹಿತಿ ಬಿಚ್ಚಿಟ್ಟರು.