ವರದಕ್ಷಿಣೆ ಕಿರುಕುಳ: ಶಿವಮೊಗ್ಗದಲ್ಲಿ ಪುಟ್ಟ ಮಕ್ಕಳಿಬ್ಬರ ಜೊತೆ ತಾಯಿ ಆತ್ಮಹತ್ಯೆ

dowry case
Published on

ಶಿವಮೊಗ್ಗ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ನೇಣುಹಾಕಿ ತಾನೂ ನೇಣು ಬಿಗಿದುಕೊಂಡು ದುರಂತ ಅಂತ್ಯಕಂಡ ಘಟನೆ ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದಲ್ಲಿ ಸಂಭವಿಸಿದೆ.

ಚೋರಡಿಯ ಜ್ಯೋತಿ(25) ಮತ್ತು ಇವರ ಮಕ್ಕಳಾದ ಎರಡೂವರೆ ವರ್ಷದ ಸಾನ್ವಿ ಮತ್ತು ಒಂದು ವರ್ಷದ ಕುಶಾಲ್ ಮೃತ ದುರ್ದೈವಿಗಳು.

ದಾವಣಗೆರೆ ಜಿಲ್ಲೆ ಸಾಸ್ವೆಹಳ್ಳಿಯ ಜ್ಯೋತಿಗೆ ಐದು ವರ್ಷದ ಹಿಂದೆ ಶಿವಮೂರ್ತಿ ಜೊತೆ ವಿವಾಹ ಮಾಡಲಾಗಿತ್ತು. ದಂಪತಿಗೆ ಎರಡು ಮುದ್ದಾದ ಮಕ್ಕಳೂ ಇದ್ದವು. ಮದುವೆ ಆದಾಗಿನಿಂದಲೂ ಜ್ಯೋತಿಗೆ ಪತಿ ಹಾಗೂ ಈತನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತಿದ್ದರು ಎನ್ನಲಾಗಿದೆ. ಬೇಸತ್ತ ಜ್ಯೋತಿ, ತನ್ನ ಮಕ್ಕಳೊಂದಿಗೆ ತವರು ಸೇರಿದ್ದಳು. ಮತ್ತೆ ಗಂಡನ ಮನೆಯವರು ಒತ್ತಾಯ ಮಾಡಿದ್ದರಿಂದಾಗಿ ಮೇ 9ರಂದು ವಾಪಸ್​ ಬಂದಿದ್ದಳು.

ಪತಿ ಶಿವಮೂರ್ತಿ ಅವರು ಜಮೀನಿಗೆ ಕೆಲಸಕ್ಕೆಂದು ಭಾನುವಾರ ಬೆಳಗ್ಗೆ ತೆರಳಿದ್ದು, ಸಂಜೆ ಮನೆಗೆ ವಾಪಸ್ ಬಂದಾಗ ಎಷ್ಟೊತ್ತಾದರೂ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡು ಪರಿಶೀಲಿಸಿದಾಗ ತಾಯಿ ಹಾಗೂ ಮಕ್ಕಳ ಶವಗಳು ಮನೆಯ ಕೋಣೆಯಲ್ಲಿ ನೇತಾಡುತ್ತಿದ್ದವು. ಮಗಳ ಮತ್ತು ಮೊಮ್ಮಕ್ಕಳ ಸಾವಿಗೆ ಅಳಿಯ ಮತ್ತು ಆತನ ಕುಟುಂಬಸ್ಥರೇ ಕಾರಣ ಎಂದು ಮೃತಳ ಪಾಲಕರು ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಮೂವರು ಬಲಿಯಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net