ರಾಜಧಾನಿಯಲ್ಲಿ ಪಿಒಪಿ ಗಣೇಶ ಮಾರಿದರೆ ಕ್ರಿಮಿನಲ್ ಕೇಸ್

mymurti_pop_murti_ganeshotsav-3
Published on

ಬೆಂಗಳೂರು: ಪ್ಲಾಸ್ಟರ್ ಆಫ್​​ ಪ್ಯಾರೀಸ್ (ಪಿಒಪಿ) ಬಳಸಿ ಗಣೇಶ ಮೂರ್ತಿ ತಯಾರಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಪರಿಸರಸ್ನೇಹಿ ಗಣೇಶ ಮಾತ್ರ ಪ್ರತಿಷ್ಠಾಪಿಸಬೇಕು. ರಾಸಾಯನಿಕ ಬಣ್ಣ, ಥರ್ಮಾಕೋಲ್ ಹಾಗೂ ಪಿಒಪಿ ಬಳಸಿ ತಯಾರಿಸುವ ಮೂರ್ತಿಯನ್ನು ನಿಷೇಧಿಸಲಾಗಿದೆ. ಹೀಗಾಗಿ, ಮೇಲಿನ ವಸ್ತುಗಳನ್ನು ಬಳಸಿ ತಯಾರಿಸಿದಲ್ಲಿ ಹಾಗೂ ಮಾರಾಟ ಮಾಡಿದಲ್ಲಿ ದಂಡ ವಿಧಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ನಿಷೇಧಿಸಿದ ವಸ್ತುಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.

ಸಾರ್ವಜನಿಕರು ತಮ್ಮ ಮನೆಗಳಲ್ಲೇ ಬಕೆಟ್, ಟಬ್‌ಗಳಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಿ ಬಳಿಕ ಆ ಮಣ್ಣನ್ನು ಕೈತೋಟ, ಹೂವಿನ ಕುಂಡಗಳಿಗೆ ಬಳಸುವಂತೆ ಅರಿವು ಮೂಡಿಸಲಾಗುವುದು. ದೊಡ್ಡ ಗಾತ್ರದ ಮೂರ್ತಿಗಳನ್ನು ವಾರ್ಡ್‌ಗಳಲ್ಲಿ ಗುರುತಿಸಿರುವ ಸ್ಥಳಗಳಲ್ಲೇ ವಿಸರ್ಜಿಸುವಂತೆ ತಿಳಿಸಲಾಗುವುದು. ಸಂಚಾರಿ ವಾಹನ ಮೂಲಕ ವಿಸರ್ಜನೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪಾಲಿಕೆ ಸೂಚಿಸಿದೆ.

ಪ್ರತ್ಯೇಕ ತಂಡ ನೇಮಕ

ಜಲಮಾಲಿನ್ಯ ತಡೆಗೆ ಪಾಲಿಕೆ ವ್ಯಾಪ್ತಿಯ ಕೆರೆ ಮತ್ತು ಕಲ್ಯಾಣಿಗಳ ಸಮೀಪದಲ್ಲೇ ತಾತ್ಕಾಲಿಕ ವಿಸರ್ಜನೆ ಸ್ಥಳಗಳನ್ನು ನಿರ್ಮಿಸಬೇಕು. ವಿಸರ್ಜನೆಯಿಂದ ಸಂಗ್ರಹಿಸುವ ಮಣ್ಣು, ಹೂಗಳು, ಪೂಜಾ ಸಾಮಗ್ರಿ, ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ವಿಗಂಡಿಸಿ ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ, ಒಣತ್ಯಾಜ್ಯವನ್ನು ಸಂಗ್ರಹಣಾ ಕೇಂದ್ರಗಳಿಗೆ ರವಾನಿಸಲಾಗುತ್ತದೆ. ಒಂದು ವೇಳೆ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಕಂಡುಬಂದಲ್ಲಿ ದಂಡ ವಿಧಿಸಲಾಗುವುದು. ಮೂರ್ತಿ ವಿಸರ್ಜನೆ ವೇಳೆ ಸಾರ್ವಜನಿಕರ ಸುರಕ್ಷತೆಗಾಗಿ ವಲಯಕ್ಕೆ ಒಬ್ಬರಂತೆ ಮೇಲುಸ್ತುವಾರಿ ಅಧಿಕಾರಿ, ವಾರ್ಡ್‌ಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ, ಧ್ವನಿವರ್ಧಕ, ನುರಿತ ಈಜುಗಾರರು ಸೇರಿ ಎನ್‌ಡಿಆರ್‌ಎ್ ತಂಡ ಹಾಜರಿರುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಾಕೀತು ಮಾಡಿದ್ದಾರೆ.

63 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಕಾರ್ಯಕ್ರಮ ಆಯೋಜಿಸಲು ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಹಾಗೂ ಆಗ್ನಿಶಾಮಕ ಇಲಾಖೆಗಳನ್ನು ಒಳಗೊಂಡಂತೆ 63 ಉಪ ವಿಭಾಗಗಳಲ್ಲಿ ಸ್ಥಾಪಿಸಿರುವ ಏಕಗವಾಕ್ಷಿ ಕೇಂದ್ರಗಳಲ್ಲಿ ಅನುಮತಿ ಪಡೆದು ಮೂರ್ತಿ ಪ್ರತಿಷ್ಠಾಪಿಸಬೇಕು. ಮೂರ್ತಿ ಪ್ರತಿಷ್ಠಾಪನೆ ಕೋರಿ ಬರುವ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರ ಅನುಮತಿ ನೀಡಲು ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಲಾಗಿದೆ. ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಈ ಕೇಂದ್ರಗಳಲ್ಲಿ ನಿಯೋಜಿಸಿದ ಆಯಾ ಇಲಾಖೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಅರ್ಜಿಯೊಂದಿಗೆ ಅಗತ್ಯ ದಾಖಲೆ ಒದಗಿಸಿ, ಮುಚ್ಚಳಿಕೆ ಪತ್ರಕ್ಕೆ ಸಹಿ ಹಾಕಿ ನಿರಾಕ್ಷೇಪಣಾ ಪತ್ರ ಪಡೆಯುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net