ಎಷ್ಟೇ ದೊಡ್ಡವರಿರಲಿ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ: ಪಾದಯಾತ್ರೆ ಹೊರಟವರಿಗೆ ಸಿಎಂ ಬೊಮ್ಮಾಯಿ‌ ಎಚ್ಚರಿಕೆ

Bommai
Published on

ಬೆಂಗಳೂರು: ಮೇಕೆದಾಟು ಪಾದಯಾತ್ರೆಯಲ್ಲಿ‌ ಪಾಲ್ಗೊಂಡವರು ಸೇರಿದಂತೆ ಸಂಘಟಕರ ವಿರುದ್ಧವೂ ಕರೊನಾ ನಿರ್ಬಂಧಗಳ ಉಲ್ಲಂಘನೆಯಡಿ ಕ್ರಮಗಳಾಗುತ್ತವೆ. ಎಷ್ಟೇ ದೊಡ್ಡವರಿರಲಿ‌ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಪಾದಯಾತ್ರೆಗೆ ಸಂಬಂಧಿಸಿದಂತೆ 30 ಜನರ ವಿರುದ್ಧ ಎಫ್​ಐಆರ್ ದಾಖಲಾಗಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಸೋಮವಾರ ಪ್ರತಿಕ್ರಿಯಿಸಿದ ಸಿಎಂ, ಕಾನೂನು ಅನುಷ್ಠಾನದ ಜವಾಬ್ದಾರಿ ಹೊತ್ತ ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ. ಬಂಧನವೋ ಅಥವಾ ವಶಕ್ಕೆ ಪಡೆಯುವುದೋ? ಎನ್ನುವುದನ್ನು ದಾಖಲಾದ ಕಾಯ್ದೆಯ ಸೆಕ್ಷನ್ ನಿರ್ಧರಿಸುತ್ತದೆ. ಕರೊನಾ ನಿರ್ಬಂಧಗಳ ಪಾಲನೆ ವಿಷಯದಲ್ಲಿ ಜನ-ಸಾಮಾನ್ಯರಿಗೊಂದು, ರಾಜಕೀಯ ನಾಯಕರಿಗೊಂದು ಎಂದು ತಾರತಮ್ಯ ಮಾಡುವ ಪ್ರಶ್ನೆಯೇ ಉದ್ಭವಿಸದು ಎಂದರು.

ಕರೊನಾ ಸೋಂಕು ಪ್ರಕರಣಗಳು ದಾಖಲಾದ ಪ್ರಕಾರ ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಪಾಸಿಟಿವಿಟಿ ದರ ಶೇ.6.80ಕ್ಕೇರಿದೆ. ಬೆಳವಣಿಗೆ ಆಧರಿಸಿ ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದು ಸಿಎಂ ಪುನರುಚ್ಚರಿಸಿದರು.

ಡಿಕೆಶಿ ವರ್ತನೆಗೆ ಬೇಸರ: ಸೋಂಕು ನಿಯಂತ್ರಣದ ಜತೆಗೆ ಪ್ರತಿಯೊಬ್ಬರ ಆರೋಗ್ಯ ರಕ್ಷಣೆಗೂ ಅಷ್ಟೇ ಮಹತ್ವ ನೀಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕರೊನಾ ಪರೀಕ್ಷೆ ಮಾಡಲು ಹೋದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವರ್ತನೆ ಬೇಸರ ಉಂಟು ಮಾಡುತ್ತದೆ. ಸರ್ಕಾರದ ಕಾಳಜಿ, ಇಲಾಖೆ ಪ್ರಯತ್ನಕ್ಕೆ ಸ್ಪಂದಿಸಿದ ರೀತಿ ಅವರ ನಡವಳಿಕೆ ಎತ್ತಿ ತೋರಿಸುತ್ತದೆ. ಇದಕ್ಕೆ ಏನೂ ಮಾಡಲಾಗದು ಎಂದು ಸಿಎಂ ಬೊಮ್ಮಾಯಿ‌ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net