

ಚಾಮರಾಜನಗರ: ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮದಲ್ಲಿ ವಾರದ ಹಿಂದೆ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕುಟುಂಬದವರೇ ಕೊಂದಿರುವ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ, ಗ್ರಾಮದ ಯುವಕನೊಬ್ಬನಿಗೆ 4 ಲಕ್ಷ ರೂ. ದಂಡ ವಿಧಿಸಿದ್ದು, ಬೇಸತ್ತ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿ ಪಾಲಕರು ಆಕೆಯನ್ನು ಕೊಲೆ ಮಾಡಿದ್ದು, ಪ್ರಕರಣ ಮುಚ್ಚಿ ಹಾಕಲು ಆತ್ಮಹತ್ಯೆಯ ಕಥೆ ಕಟ್ಟಿ, ಪೊಲೀಸರಿಗೆ ವಿಷಯ ತಿಳಿಸದೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ರಾಮದ ಸೋಮೇಶ್ ಎಂಬಾತನನ್ನು ಯುವತಿ ಪ್ರೀತಿಸುತ್ತಿದ್ದಳು. ಇದೇ ವಿಚಾರಕ್ಕೆ ಗ್ರಾಮಸ್ಥರು ಸೋಮೇಶ್ಗೆ 4 ಲಕ್ಷ ರೂ. ದಂಡ ಹಾಕಿದ್ದರು. ಇದರಿಂದ ಬೇಸತ್ತ ಯುವಕ ಆತ್ಮಹತ್ಯೆಗೆ ಯತ್ನಿಸಿ, ಚಾಮರಾಜನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮದ ಕಟ್ಟುಪಾಡುಗಳಿಗೆ ಹೆದರಿ ಸತ್ಯ ಬಾಯಿ ಬಿಡಲು ಯುವಕ ಹಿಂದೇಟು ಹಾಕುತ್ತಿದ್ದಾನೆ. ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆಸಿ ಇಡೀ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಯುವತಿ ಆತ್ಮಹತ್ಯೆ ಕುರಿತು ಯಾವುದೇ ಮಾಹಿತಿ ನೀಡದೆ ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ಪಾಲಕರ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ' ಎಂದು ಚಾಮರಾಜನಗರ ಎಸ್ಪಿ ಟಿ.ಪಿ.ಶಿವಕುಮಾರ್ ತಿಳಿಸಿದ್ದಾರೆ.
ನಮಗೆ ಬಂದ ಮಾಹಿತಿ ಪ್ರಕಾರ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮರ್ಯಾದೆ ಹತ್ಯೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ದೂರು ಬಂದರೆ ತನಿಖೆ ನಡೆಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.