

ಚಾಮರಾಜನಗರ: ಪತ್ನಿಯ ನಡೆಗೆ ಬೇಸತ್ತ ಗಂಡ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಸಂಭವಿಸಿದೆ.
ಸಾವಿಗೂ ಮುನ್ನ ಡೆತ್ನೋಟ್ನಲ್ಲಿ ತನ್ನ ಮನದ ನೋವನ್ನ ಅಕ್ಷರಕ್ಕಿಳಿಸಿರುವ ಗಂಡ, ನನ್ನ ಸಾವಿಗೆ ಮೈಸೂರಿನ ಡೋಂಗಿ ಬಾಬಾ ಖುರ್ರಾಂ ಪಾಷಾ ಮತ್ತು ಈತನ ಇಬ್ಬರು ಸಹಚರರೂ ಕಾರಣ. ನನ್ನ ಪತ್ನಿಯ ತಲೆ ಕೆಡಿಸಿ ಡೋಂಗಿ ಬಾಬಾಗೆ ತಲೆಹಿಡಿದಿದ್ದಾರೆ. ಇವರನ್ನ ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಬರೆದು ಸಹಿ ಮಾಡಿದ್ದಾರೆ.
ಮಹಮದ್ ಅಫ್ಘಾನ್ ಮೃತ ದುರ್ದೈವಿ. ಈತನಿಗೆ ತನ್ಜೀಯಾ ಕೌಸರ್ ಎಂಬಾಕೆ ಜತೆ ಮದುವೆ ಆಗಿದೆ. ದಂಪತಿ ಇಬ್ಬರೂ ಬಾಬಾ ಖುರ್ರಾಂ ಪಾಷಾ ಬಳಿ ಚಿಕಿತ್ಸೆ ಪಡೆಯಲು ಹೋಗುತ್ತಿದ್ದರು. ಚಿಕಿತ್ಸೆ ನೆಪದಲ್ಲಿ ಮಹಿಳೆಯನ್ನು ಖುರ್ರಾಂ ಪಾಷಾ ತನ್ನ ಬಲೆಗೆ ಬೀಳಿಸಿಕೊಂಡಿದ್ದನಂತೆ. ಮನನೊಂದ ಮಹಮದ್ ಅಫ್ಘಾನ್ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಬಾ ವಿರುದ್ಧ ಕ್ರಮ ಕೈಗೊಳ್ಳಲು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.