ರಾತ್ರಿ ವರ್ಗಾವಣೆ ಆಗಿತ್ತು, ಬೆಳಗ್ಗೆ ಬದಲಾಯಿತು! ಚಾಮರಾಜನಗರ ಜಿಲ್ಲಾಧಿಕಾರಿ ಮೇಲಿರುವ ಕೃಪಾಕಟಾಕ್ಷ ಯಾರದ್ದು?

dc ravi
Published on

ಚಾಮರಾಜನಗರ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವರ್ಗಾವಣೆ ಗೊಂದಲ ಹುಟ್ಟಿಸಿದೆ‌. ಬುಧವಾರ ರಾತ್ರಿ ವರ್ಗಾವಣೆ ಆಗಿತ್ತು. ಗುರುವಾರ ಬೆಳಗ್ಗೆ ಬದಲಾಗಿದೆ ಎಂದು ತಿಳಿದುಬಂದಿದೆ.

ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಬೇಕಿದ್ದ ಡಾ.ಬಿ.ಸಿ. ಸತೀಶ್ ಅವರು ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿ, ನಿನ್ನೆ ರಾತ್ರಿ‌ ವರ್ಗಾವಣೆ ಆಗಿತ್ತು. ಬೆಳಗ್ಗೆ ಬದಲಾಗಿದೆ. ನಾನು ಚಾಮರಾಜನಗರಕ್ಕೆ ಬರ್ತಾ ಇಲ್ಲ ಎಂದು‌ ಹೇಳಿದ್ದಾರೆ.

ಸರ್ಕಾರ ಕೆಲ ತಿಂಗಳ ಹಿಂದೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾಗ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರನ್ನು ಬೆಂಗಳೂರಿನ ಸಕಾಲ‌ ಮಿಷನ್ ನ ಹೆಚ್ಚುವರಿ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಿತ್ತು. ಚಾಮರಾಜನಗರ ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರು ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ.ಬಿ.ಸಿ.ಸತೀಶ್ ಅವರನ್ನು ನಿಯುಕ್ತಿಗೊಳಸಲಾಗಿತ್ತು. ಆದರೆ ಜಿಲ್ಲಾಧಿಕಾರಿ ರವಿ ವರ್ಗಾವಣೆ ಮಾತ್ರ ಆಗಲಿಲ್ಲ. ಅವರೇ ಈವರೆಗೂ ಮುಂದುವರಿದಿದ್ದಾರೆ. ಇದನ್ನೂ ಓದಿರಿ ಬಿಜೆಪಿ ಶಾಸಕ ಪಿ.ರಾಜೀವರ ತಾಯಿ ಕರೊನಾಗೆ ಬಲಿ

ಆಮ್ಲಜನಕ ದುರಂತದಲ್ಲಿ ಹೈಕೋರ್ಟ್ ನೇಮಸಿದ್ದ ಸಮಿತಿ ‌ಸತ್ಯಶೋಧನೆ ನಡೆಸಿ ಜಿಲ್ಲಾಧಿಕಾರಿ ವೈಫಲ್ಯವನ್ನು ಎತ್ತಿಹಿಡಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮೇಲೆ ಶಿಸ್ತು ಕ್ರಮ‌ಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ಇದರ ಪರಿಣಾಮವಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವರ್ಗಾವಣೆ ಆಗಿದೆ ಎಂದು ಹೇಳಲಾಗಿತ್ತು. ಗುಂಡ್ಲುಪೇಟೆ ಬಿಜೆಪಿ ಶಾಸಕ ಮತ್ತು ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಸಹ ಗುರುವಾರ ಬೆಳಗ್ಗೆ ಡಿಸಿ ರವಿ ವರ್ಗಾವಣೆ ಆಗಿರುವುದಾಗಿ ತಿಳಿಸಿದ್ದರು.

ಆದರೆ, ಬುಧವಾರ ವರ್ಗಾವಣೆ ಆಗಿ ಗುರುವಾರ ಬೆಳಗ್ಗೆ ಬದಲಾಗಿರುವುದು ಪ್ರಭಾವಿಗಳ ಕೃಪೆಯಿಂದ ಡಿಸಿ ರವಿ ಚಾ.ನಗರದಲ್ಲೇ ಉಳಿದುಕೊಂಡಿರಬಹುದು ಎಂಬ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಡಾ.ಬಿ.ಸಿ.ಸತೀಶ್ ಅವರನ್ನು ಎರಡು ಬಾರಿ ಜಿಲ್ಲೆಗೆ ಕಳುಹಿಸಲು ಮುಂದಾಗಿ ಮತ್ತೆ ವಾಪಸ್ ಕರೆಸಲಾಗಿದೆ. ಅವರಿಗೆ ಸರ್ಕಾರ ಇನ್ನು ಯಾವುದೇ ಹುದ್ದೆ ತೋರಿಲ್ಲ.

ನಾನು ವರ್ಗಾವಣೆ ಆಗಿಲ್ಲ: ಈ ಕುರಿತು ಮಾಧ್ಯಮಗಳಿಗೆ ಕೋಪದಲ್ಲೇ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ನಾನು ಇಲ್ಲೇ ಇದ್ದೀನಲ್ಲಪ್ಪಾ, ಇಲ್ಲೆ ಇದ್ದೀನಿ. ವರ್ಗಾವಣೆ ಆಗಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net