

ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಕಳೆದ ತಿಂಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟಾರೆ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದ ಸಿಇಟಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ಸಿಇಟಿ ಫಲಿತಾಂಶ ಪ್ರಕಟಿಸಿದರು. ಇಂಜಿನಿಯರಿಂಗ್, ಪಶುಸಂಗೋಪನೆ, ಕೃಷಿ ವಿಜ್ಞಾನ, ಫಾರ್ಮಸಿ, ಯೋಗ ಮತ್ತು ನ್ಯಾಚುರೋಪತಿ, ವೆಟರಿನರಿ ಕೋರ್ಸುಗಳಲ್ಲಿ ಮೊದಲ 10 ರ್ಯಾಂಕ್ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಸಚಿವರು ಪ್ರಕಟಿಸಿದರು. ಇಂಜಿನಿಯರಿಂಗ್ ವಿಭಾಗದಲ್ಲಿ ಯಲಹಂಕದ ನ್ಯಾಷನಲ್ ಪಬ್ಲಿಕ್ ಕಾಲೇಜಿನ ಅಪೂರ್ವ ತಂಡನ್ ಮತ್ತು ಯೋಗ ವಿಭಾಗದಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸಾಲೆನ್ಸ್ ಕಾಲೇಜಿನ ಹರ್ಶಿಕೇಶ್, ಕೃಷಿ ವಿಭಾಗದಲ್ಲಿ ಎಚ್ಎಎಲ್ ಪಬ್ಲಿಕ್ ಶಾಲೆಯ ಅರ್ಜುನ್ ರವಿಶಂಕರ್ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ ಎಂದು ವಿವರಿಸಿದರು.
ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಹೊರನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 2,16,559 ವಿದ್ಯಾರ್ಥಿಗಳ ಪೈಕಿ 2,10,962 ಮಂದಿ ಭೌತಶಾಸ್ತ್ರ ಮತ್ತು 2,10,924 ಮಂದಿ ರಸಾಯನಶಾಸ್ತ್ರ ವಿಷಯ ಪರೀಕ್ಷೆಗೆ ಹಾಜರಾಗಿದ್ದರು. ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿದ ನಂತರ ಇಂಜಿನಿಯರಿಂಗ್ ಕೋರ್ಸ್ಗೆ 171656 ಬ್ಯಾಂಕ್ ನೀಡಲಾಗಿದೆ. ಮುಂದುವರಿದು ಕೃಷಿ ಕೋರ್ಸ್ಗೆ 139968 ಅಭ್ಯರ್ಥಿಗಳು, 142820 ಅಭ್ಯಥಿ್ಗಳು ಪಶುಸಂಗೋಪನೆಗೆ, 142750 ಮಂದಿ ಯೋಗ ಮತ್ತು ನ್ಯಾಚುರೋಪತಿ ಮತ್ತು 174568 ಅಭ್ಯರ್ಥಿಗಳು ಬಿ. ಫಾರ್ಮ ಕೋರ್ಸ್ಗೆ ಮತ್ತು ಫಾರ್ಮ್-ಡಿ ಕೋರ್ಸ್ಗೆ ಅರ್ಹತೆ ಪಡೆದಿದ್ದಾರೆ ಎಂದು ಸಚಿವರು ವಿವರಿಸಿದರು.
ಈಗಾಗಲೇ ಸಿಬಿಎಸ್ಸಿ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಎಲ್ಲ ಅಂಕಗಳ ಆಧಾರದಲ್ಲಿ ಅಂತಿಮ ರ್ಯಾಂಕ್ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಕೆಇಎ ತಿಳಿಸಿದೆ. ಫಲಿತಾಂಶವನ್ನು ಪ್ರಾಧಿಕಾರದ ಅಧಿಕೃತ ವೆಬ್ಸೈಟ್ www.karresults.nic.in ನಲ್ಲಿ ನೋಡಬಹುದು. ಫಲಿತಾಂಶದ ಜತೆ ಮೆರಿಟ್ ಪಟ್ಟಿ ಕೂಡ ಪ್ರಕಟವಾಗಿದೆ. ಸುದ್ದಿಗೋಷ್ಠಿಯಲ್ಲಿ ವಾರ್ತಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ, ಅಧಿಕಾರಿ ರಮ್ಯಾ ಇದ್ದರು.