

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮೂಲ್ಕಿ ಬಸ್ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರೊಂದು ಸ್ಕೂಟರ್‌ಗೆ ಡಿಕ್ಕಿಯಾಗಿ ಹೆದ್ದಾರಿ ಬದಿಯ ಹೋಟೆಲ್‌ಗೆ ನುಗ್ಗಿದ್ದು, ಹೋಟೆಲ್ ಮುಚ್ಚಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರನ್ನು ಕಿನ್ನಿಗೋಳಿ ಸಮೀಪದ ಬಟ್ಟಕೋಡಿಯಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಮೂಲ್ಕಿ ನಿವಾಸಿ ಮನೋಜ್(34)ಎಂದು ಗುರುತಿಸಲಾಗಿದ್ದು, ಕಾರಿನಲ್ಲಿದ್ದ ಚಾಲಕ ಸಹಿತ ಉಡುಪಿ ಜಿಲ್ಲೆಯ ಉಚ್ಚಿಲ ಮೂಲದ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಮೂಲ್ಕಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರನ್ನು ಎಳೆದುಕೊಂಡು ಹೋಗಿ ಹೆದ್ದಾರಿ ಬದಿಯ ಸರ್ವೀಸ್ ರಸ್ತೆ ದಾಟಿ ಹೋಟೆಲ್‌ನೊಳಗಡೆ ನುಗ್ಗಿದೆ.
ಸ್ಕೂಟರ್ ಸವಾರ ಮನೋಜ್‌ಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರಾದ ಗಣೇಶ್, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಮತ್ತಿತರರು ಸೇರಿ ಸಂತೋಷ್ ಚಿತ್ರಾಪು ಅವರ ಆಟೋದಲ್ಲಿ ಗಾಯಾಳುವನ್ನು ಮುಕ್ಕ ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದಿದ್ದಾರೆ. ಕಾರು ನುಗ್ಗಿದ ಸ್ಥಳದಲ್ಲಿ ಹೂವಿನ ಅಂಗಡಿ ಹಾಗೂ ವಿದ್ಯುತ್ ಕಂಬವಿರುವುದೇ ಅಲ್ಲದೆ ಹಗಲಿನಲ್ಲಿ ಜನ ನಿಬಿಡ ಪ್ರದೇಶವಾಗಿದ್ದು ಅಪಘಾತ ರಾತ್ರಿ ಹೊತ್ತು ನಡೆದ ಕಾರಣ ಭಾರಿ ಅಪಾಯ ತಪ್ಪಿದೆ.
ಅಪಘಾತದಿಂದ ಹೋಟೆಲ್‌ನ ಹೊರಾಂಗಣಕ್ಕೆ ಹಾನಿಯಾಗಿದ್ದು, ಹೋಟೆಲ್ ಹೊರಗಡೆ ಇಟ್ಟಿದ್ದ ತಂಪು ಪಾನೀಯದ ಬಾಟಲ್‌ಗಳು ಒಡೆದು ಚೆಲ್ಲಾಪಿಲ್ಲಿಯಾಗಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಹೆದ್ದಾರಿ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಕಾರನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ.