

ಗುರುಪುರ: ಗೂಡ್ಸ್ ಟೆಂಪೋದಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ದನವೊಂದನ್ನು ಬಜ್ಪೆ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿಎಸ್‌ಐ ರೇವಣಸಿದ್ದಪ್ಪ ಅವರಿಗೆ ಬಂದ ಖಚಿತ ಮಾಹಿತಿಯನ್ವಯ ಕೊಳಂಬೆ ಗ್ರಾಮದ ಸುಂಕದಕಟ್ಟೆಯ ಅಮ್ಮ ಜನರಲ್ ಸ್ಟೋರ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಅನುಮಾನಾಸ್ಪದವಾಗಿ ಬಂದ ಗೂಡ್ಸ್ ಟೆಂಪೋ ತಡೆದು ನಿಲ್ಲಿಸಿದರು. ಚಾಲಕ ಜೋಸೆಫ್ ನಿಲೇಶ್ ಅಲ್ಮೇಡಾನನ್ನು ವಿಚಾರಿಸಿದಾಗ ಕೊಳಂಬೆಯ ಪೀಟರ್ ಪೌಲ್ ರೋಡ್ರಿಗಸ್ ಎಂಬುವವರು ಈ ದನವನ್ನು ಯೆಯ್ಯಡಿಯ ವಸಂತ ಪ್ರಭು ಅವರಿಗೆ ಮಾರಾಟಮಾಡಿದ್ದು, ವಾರಸುದಾರರಿಗೆ ತಲುಪಿಸಲು ವಾಹನದಲ್ಲಿ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ.ಆದರೆ ಈ ವ್ಯವಹಾರಕ್ಕೆ ಸಂಬಂಧಿತ ಯಾವುದೇ ಪ್ರಾಧಿಕಾರದಿಂದ ಅನುಮತಿಪತ್ರ ಪಡೆದಿರಲಿಲ್ಲ.