ಮಂಗಳೂರು: ಪೆಟ್ರೋಲ್ ಬಂಕ್‌ಗೆ ಪೆಟ್ರೋಲ್ ತುಂಬಿಸಲು ಬಂದಿದ್ದ ಕಾರಿನ ಬ್ಯಾಟರಿ ಸ್ಫೋಟಗೊಂಡು ಕಾರು ಬೆಂಕಿಗಾಹುತಿಯಾದ ಘಟನೆ ಲೇಡಿಹಿಲ್ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ. ಬಂಕ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಬೆಂಕಿ ನಂದಿಸಿದ್ದಾರೆ.
ಬಜ್ಪೆ ನಿವಾಸಿ ಪಾರ್ಶ್ವನಾಥ್ ಎಂಬುವರು ಭಾನುವಾರ ಮಧ್ಯಾಹ್ನ ವಿವಾಹ ಕಾರ್ಯಕ್ರಮ ಮುಗಿಸಿ ಇಬ್ಬರು ಸಂಬಂಧಿಕರ ಜತೆ ತಮ್ಮ ಮಾರುತಿ 800 ಕಾರಿನಲ್ಲಿ ಮರಳಿ ಬಜ್ಪೆಯತ್ತ ಹೊರಟಿದ್ದರು. ದಾರಿ ಮಧ್ಯೆ ಪೆಟ್ರೋಲ್ ತುಂಬಿಸಲು ಲೇಡಿಹಿಲ್ ಬಳಿಯ ಪೆಟ್ರೊಲ್ ಬಂಕ್‌ಗೆ ಬಂದಿದ್ದರು. ಈ ವೇಳೆ ದಿಢೀರನೆ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಕಾರಿನಲ್ಲಿದ್ದ ಮೂವರೂ ಹೊರಗೆ ಬಂದು ಅಪಾಯದಿಂದ ಪಾರಾದರು.
ಬಂಕ್ ಸಿಬ್ಬಂದಿ, ಸಾರ್ವಜನಿಕರು ನೋಡುತ್ತಿದ್ದಂತೆ ಕಾರಿನ ಬ್ಯಾಟರಿ ಸ್ಫೋಟಗೊಂಡು ಇಡೀ ಕಾರು ಬೆಂಕಿಗೆ ಆಹುತಿಯಾಯಿತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೆಟ್ರೋಲ್ ಬಂಕ್ ಸಿಬ್ಬಂದಿ ಅಗ್ನಿ ನಂದಿಸುವ ಸ್ಪ್ರೇ, ಮರಳು ಎರಚಿದ್ದಲ್ಲದೆ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಕದ್ರಿ ಅಗ್ನಿಶಾಮಕ ದಳದವರು ಆಗಮಿಸಿ ಉಳಿದ ಕಾರ್ಯಾಚರಣೆ ನಡೆಸಿದರು.