

ಹುಣಸೂರು: ಸೋಮನಹಳ್ಳಿ ಬಳಿ ಎರಡು ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಅಣ್ಣ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿದ್ದ ತಂಗಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಅಣ್ಣ-ತಂಗಿಯ ಸಾವಿಂದ ಕುಟುಂಬಸ್ಥರು ಕಂಗಾಲಾಗಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ಬನ್ನಿಕುಪ್ಪೆ ಗ್ರಾಮದ 'ವಿಜಯವಾಣಿ' ಪತ್ರಿಕೆ ಪ್ರತಿನಿಧಿ ಚಲುವರಾಜು ಅವರ ಪುತ್ರ ಕೀರ್ತಿರಾಜ್(39) ಮತ್ತು ಚಲುವರಾಜು ಅವರ ತಮ್ಮನ ಮಗಳು ರಶ್ಮಿ(21) ಸಾವಲ್ಲೂ ಒಂದಾದ ಅಣ್ಣ-ತಂಗಿ. ಸೋಮವಾರ ರಾತ್ರಿ ಕೀರ್ತಿರಾಜ್ ಮೈಸೂರಿನತ್ತ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ಹುಣಸೂರು ತಾಲೂಕಿನ ಸೋಮನಹಳ್ಳಿ ಬಳಿ ನಿಯಂತ್ರತಪ್ಪಿದ ಕಾರು ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದು ರಸ್ತೆಬದಿಯ ಮರಕ್ಕೆ ಅಪ್ಪಳಿಸಿತ್ತು. ಪರಿಣಾಮ ಕೀರ್ತಿರಾಜ್ ಸ್ಥಳದಲ್ಲೇ ಮೃತಪಟ್ಟರು.
ಅಪಘಾತದಲ್ಲಿ ಗಾಯಗೊಂಡಿದ್ದ ಮೈಸೂರು ನಗರದ ನಿವಾಸಿ ರವಿಕುಮಾರ್ (37) ಮಂಗಳವಾರ ಮೃತಟ್ಟಿದ್ದು, ಮೈಸೂರಿನ ಉದಯಗಿರಿಯ ನಿವಾಸಿ ಇರ್ಫಾನ್ ಖಾನ್ ಮತ್ತು ಬನ್ನಿಕುಪ್ಪೆ ಗ್ರಾಮದ ನಾಗೇಂದ್ರ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತ್ತ ಅಣ್ಣ ಕೀತಿರಾಜ್ ಕಾರು ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದ ಸಹೋದರಿ ರಶ್ಮಿ(21) ತೀವ್ರ ಹೃದಯಾಘಾತದಿಂದ ಮೃತಪಟ್ಟರು. ಅಣ್ಣ ತಂಗಿಯರು ಒಂದಾಗಿ ಹೋಗಿದ್ದು, ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಆಘಾತ ಉಂಟು ಮಾಡಿದೆ. ಇವರಿಬ್ಬರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಮಂಗಳವಾರ ಸಂಜೆ ನೆರವೇರಿತು.