

ಬಳ್ಳಾರಿ: ನಾನು ಕೇಳಿರೋದೇ ಒಂದು, ಕೊಟ್ಟಿರೋದೇ ಮತ್ತೊಂದು. ನನಗೆ ಕೊಟ್ಟಿರುವ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಳುವೆ. ನನ್ನಿಷ್ಟದ ಖಾತೆ ಕೊಡದಿದ್ರೆ ನಾನು ಶಾಸಕನಾಗಿ ಉಳಿಯುವೆ ಎಂದು ಸಚಿವ ಆನಂದ್ ಸಿಂಗ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಅಸಮಾಧಾನಗೊಂಡ ಆನಂದ್ ಸಿಂಗ್, ಬಿಜೆಪಿ ಸರ್ಕಾರ ಬರಲು ಮೊದಲು ರಾಜೀನಾಮೆ ಕೊಟ್ಟದ್ದು ನಾನು. ಆ ಬಗ್ಗೆ ಎಲ್ಲರಿಗೂ ಗೊತ್ತಿದೆ. ನನ್ನಂತೆ ಹಲವರು ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಯಾಗಿದೆ ಎಂದರು.
ಆನಂದ್ ಸಿಂಗ್ಗೆ ಪ್ರವಾಸೋದ್ಯಮ ಖಾತೆ ಕೊಡಲಾಗಿದೆ. ಈ ಖಾತೆ ಕೊಟ್ಟಿದ್ದಕ್ಕೆ ಬೇಸರಗೊಂಡಿರುವ ಆನಂದ್ ಸಿಂಗ್, ನನಗೆ ನಿರಾಶೆ ಆಗಿದೆ. ನಾನು ಕೇಳಿದ ಖಾತೆ ಕೊಡದಿದ್ದಕ್ಕೆ ಬೇಸರ ಆಗಿದೆ ಎಂದರು. ಮತ್ತೊಮ್ಮೆ ಸಿಎಂಗೆ ಮನವಿ ಮಾಡುವೆ. ಕೊಡದಿದ್ದರೆ ನನ್ನ ದಾರಿಯನ್ನ ನಾನೇ ನೋಡಿಕೊಳ್ಳುವೆ ಎಂದು ಆಕ್ರೋಶ ಹೊರಹಾಕುವ ಮೂಲಕ ರಾಜೀನಾಮೆ ನೀಡೋದೇ ಲೇಸು ಎನ್ನುವ ಹಂತಕ್ಕೆ ಬಂದಿದ್ದಾರೆ.