

ಚಿಂಚೋಳಿ: ಬಿಜೆಪಿ ಹಿರಿಯ ಮುಖಂಡ ಹಾಗೂ ಆರ್ಎಸ್ಎಸ್ ಕಾರ್ಯಕರ್ತ ರೇವಣಸಿದ್ದಪ್ಪ ಮಜ್ಜಗಿ(56) ಹೃದಯಾಘಾತದಿಂದ ಬುಧವಾರ ರಾತ್ರಿ ನವದೆಹಲಿಯಲ್ಲಿ ನಿಧನರಾದರು.
ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಒಂದು ಅವಧಿಗೆ ಪಕ್ಷದ ತಾಲೂಕು ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ನ್ಯಾಯಬೆಲೆ ಅಂಗಡಿಗಳ ನಷ್ಟ ಪರಿಹಾರ ಭರಿಸುವಂತೆ ಒತ್ತಾಯಿಸಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ನೇತೃತ್ವದಲ್ಲಿ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಚಿಂಚೋಳಿಯ 9 ಜನರೊಂದಿಗೆ ವಿಮಾನದ ಮೂಲಕ ದೆಹಲಿಗೆ ಹೋಗಿದ್ದರು. ಹೋರಾಟದಲ್ಲಿ ಪಾಲ್ಗೊಂಡು ಗುರುವಾರ ಚಿಂಚೋಳಿಗೆ ವಾಪಸ್ ಆಗಬೇಕಿತ್ತು. ದೆಹಲಿಯ ಲಾಡ್ಜ್ನ ರೂಮಿನಲ್ಲಿ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
ನೆರವಿಗೆ ಬಂದ ಡಾ.ಜಾಧವ್: ದೆಹಲಿಯಲ್ಲಿ ಚಿಂಚೋಳಿ ಬಿಜೆಪಿ ಮುಖಂಡನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂಸದ ಡಾ.ಜಾಧವ್, ಲಾಡ್ಜ್ಗೆ ತೆರಳಿ ಸಮರ್ಪಕ ಮಾಹಿತಿ ಪಡೆದರು. ಅಲ್ಲದೆ ಸ್ಥಳೀಯ ಆಸ್ಪತ್ರೆಗೆ ಹೋಗಿ ಮರಣೋತ್ತರ ಪರೀಕ್ಷೆಗೂ ಅನುವು ಮಾಡಿಕೊಟ್ಟಿದ್ದಾರೆ. ಹೆಲಿಕಾಪ್ಟರ್ ಮೂಲಕ ರೇವಣಸಿದ್ದಪ್ಪ ಮೃತದೇಹ ಚಿಂಚೋಳಿಗೆ ಕರೆತರಲು ಸಹ ವ್ಯವಸ್ಥೆ ಮಾಡಿದ್ದಾರೆ.
ರೇವಣಸಿದ್ದಪ್ಪ ಮಜ್ಜಗಿ ಅವರಿಗೆ ಪತ್ನಿ, ಪುತ್ರ-ಪುತ್ರಿ ಇದ್ದಾರೆ. ಇಂದು(ಗುರುವಾರ) ಸಂಜೆ ಚಿಂಚೋಳಿಯಲ್ಲಿ ಅವರ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.