ತುಮಕೂರಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರವೆಸಗಿದ್ದ ಎಎಸ್​ಐಗೆ 20 ವರ್ಷ ಜೈಲು! 4 ವರ್ಷದ ಹಿಂದೆ ನಡೆದಿತ್ತು ಹೀನ ಕೃತ್ಯ

asi umeshaiah
Published on

ತುಮಕೂರು: 32 ವರ್ಷದ ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಎಎಸ್​ಐ ಉಮೇಶಯ್ಯಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

2017ರ ಜ.15ರಂದು ನೈಟ್ ರೌಂಡ್ಸ್​ನಲ್ಲಿದ್ದ ಗ್ರಾಮಾಂತರ‌ ಪೊಲೀಸ್​ ಠಾಣೆ ಎಎಸ್​ಐ ಉಮೇಶಯ್ಯ, ತುಮಕೂರು ನಗರದ ಅಂತರಸನಹಳ್ಳಿ ಸೇತುವೆ ಬಳಿ ಹೋಗುತಿದ್ದ ಬುದ್ಧಿಮಾಂದ್ಯೆಯನ್ನು ಖಾಸಗಿ ಜೀಪ್​ನಲ್ಲಿ ಕೂರಿಸಿಕೊಂಡು ಅತ್ಯಾಚಾರ ಎಸಗಿದ್ದ. ಸಂತ್ರಸ್ತೆಯ ಪೋಷಕರು ಎಎಸ್​ಐ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು, ಪೊಲೀಸ್​ ಇಲಾಖೆಯೂ ತಲೆತಗ್ಗಿಸುವಂತಹ ಕೃತ್ಯ ಎಸಗಿದ್ದ ಉಮೇಶಯ್ಯ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ ದಟ್ಟವಾಗಿ ಕೇಳಿಬಂದಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ, ಆರೋಪ ಸಾಬೀತಾಗಿದ್ದು ಉಮೇಶಯ್ಯ ತಪ್ಪಿತಸ್ಥನೆಂದು ಜ.28ರಂದು ಘೋಷಿಸಿದ್ದರು. ಶಿಕ್ಷೆಯ ತೀರ್ಪನ್ನು ಜ.31ಕ್ಕೆ ಕಾಯ್ದಿರಿಸಿದ್ದರು. ಇಂದು ಸಂಜೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಅಪರಾಧಿ ಉಮೇಶಯ್ಯಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ, ಸಂತ್ರಸ್ತ ಯುವತಿಗೆ 1 ಲಕ್ಷ ರೂ. ದಂಡದ ಮೊತ್ತವನ್ನು ಪರಿಹಾರ ಕೊಡುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net