9 ಸಾವಿರ ವಾಹನ ಚಾಲಕರು,ಸಹಾಯಕರು ಖಾಯಂ:ಸಿಎಂ ಸಿದ್ದರಾಮಯ್ಯ ಘೋಷಣೆ

pourakarmika
Published on

ಬೆಂಗಳೂರು:ನಮ್ಮ ಸರ್ಕಾರ ಕೊಟ್ಟ ಮಾತಿನಂತೆ 12,692 ಪೌರಕಾರ್ಮಿಕರಿಗೆ ಖಾಯಂ ಮಾಡಿ ನೇಮಕಾತಿ ಪತ್ರ ವಿತರಿಸಿದೆ.ಮುಂದಿನ ದಿನಗಳಲ್ಲಿ ಅಂದಾಜು 9 ಸಾವಿರ ವಾಹನ ಚಾಲಕರು, ಸಹಾಯಕರು ಹಾಗೂ ಆಪರೇರ್ಟಸ್​ಗಳನ್ನೂ ಖಾಯಂ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಪೌರಕಾರ್ಮಿಕರ ದಿನ ನಿಮಿತ್ತ ಬಿಬಿಎಂಪಿ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ "ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ' ಕಾರ್ಯಕ್ರಮದಲ್ಲಿ ಮಾತನಾಡಿದರು. ಶುಚಿತ್ವದ ಕಾಯಕದಲ್ಲಿ ತೊಡಗಿರುವವರನ್ನು ಖಾಯಂ ನೇಮಕಾತಿಗೆ ಸರ್ಕಾರ ಬದ್ಧವಾಗಿದೆ. ಮೊದಲ ಅವಧಿಯಲ್ಲಿ ಸಿಎಂ ಆಗಿದ್ದ ವೇಳೆ ಪೌರಕಾರ್ಮಿಕರಿಗೆ ಕನಿಷ್ಟ ವೇತನ ಕಾಯ್ದೆ ತಂದೆ. ಈ ಹಿನ್ನೆಲೆಯಲ್ಲಿ 7 ಸಾವಿರ ರೂ. ದೊರೆಯುತ್ತಿದ್ದ ಸಂಬಳ 17 ಸಾವಿರ ರೂ.ಗೆ ಏರಿಕೆಯಾಗಿತ್ತು. ಬ್ಯಾಂಕ್​ ಖಾತೆಗೆ ನೇರವಾಗಿ ಪಾವತಿ ವ್ಯವಸ್ಥೆ ಮಾಡಲಾಗಿತ್ತು ಎಂದರು.

ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಪೌರಕಾರ್ಮಿಕರ ಬಹುದಿನಗಳ ಬೇಡಿಕೆಯಾಗಿದ್ದ ಖಾಯಂ ನೇಮಕಾತಿಯನ್ನು ಅಂದಿನ ಸರ್ಕಾರ ಈಡೇರಿಸದಿದ್ದಲ್ಲಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಪೂರೈಸುವುದಾಗಿ ನೀಡಲಾಗಿದ್ದ ಭರವಸೆಯನ್ನು ಇಂದು ಈಡೇರಿಸಿದ್ದೇನೆ.ಇದರಿಂದ ಪೌರಕಾರ್ಮಿಕನಿಗೆ 39 ಸಾವಿರ ರೂ.ವೇತನ ಸಿಗಲಿದೆ. ಶುಚಿತ್ವದಲ್ಲಿ ದೈವತ್ವ ಕಾಣಬೇಕು ಎಂದು ಗಾಂಧಿ ನುಡಿದಿದ್ದರು. ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಶ್ರೇಷ್ಠವಾದ ಕೆಲಸ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ತಿಳಿಸಿದ್ದು, ಯಾವುದೇ ಕೆಲಸದಲ್ಲಿ ಮೇಲು ಕೀಳೆಂಬುದು ಇಲ್ಲ ಎಂದು ಸಿಎಂ ಹೇಳಿದರು.

ಎಐಸಿಸಿ ಪ್ರಧಾನ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್​ ಸುಜೇವಾಲ, ಸಚಿವರಾದ ಎಚ್​.ಸಿ. ಮಹಾದೇವಪ್ಪ, ರಾಮಲಿಂಗಾರೆಡ್ಡಿ, ರಹೀಂಖಾನ್​, ಭೈರತಿ ಸುರೇಶ್​, ರಾಜ್ಯಸಭೆ ಸದಸ್ಯ ನಾಜೀರ್​ ಹುಸೇನ್​, ಸಂಸದ ರಾಧಾಕೃಷ್ಣನ್​, ಶಾಸಕರಾದ ಎಸ್​.ಟಿ.ಸೋಮಶೇಖರ್​, ಶಿವಣ್ಣ, ರಿಜ್ವಾನ್​ ಅರ್ಷದ್​, ಶ್ರೀನಿವಾಸ್​, ಎಂಎಲ್ಸಿರಾದ ರವಿ, ಯು.ಬಿ.ವೆಂಕಟೇಶ್​, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್​ ಗಿರಿನಾಥ್​, ಮುಖ್ಯ ಆಯುಕ್ತ ಮಹೇಶ್ವರರಾವ್​ ಮತ್ತಿತರರಿದ್ದರು.

ಮುಖ್ಯವಾಹಿನಿಗೆ ಬರಬೇಕು: ಒಂದು ಸಾವಿರ ಪೌರಕಾರ್ಮಿಕರನ್ನು ವಿದೇಶಕ್ಕೆ ಕಳಿಸುವ ಯೋಜನೆ ಸೇರಿ ಹಲವಾರು ಕಲ್ಯಾಣ ಯೋಜನೆಗಳನ್ನು ಪೌರಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಪೌರಕಾರ್ಮಿಕರು ಮತ್ತು ಅವರ ಕುಟುಂಬದವರೂ ಮುಖ್ಯವಾಹಿನಿಗೆ ಬರಬೇಕು. ಈ ಮೂಲಕ ಸಮಸಮಾಜವನ್ನು ನಿರ್ಮಿಸುವ ಉದ್ದೇಶ ಸರ್ಕಾರದ್ದಾಗಿದೆ. ರಾಜ್ಯದ ಎಲ್ಲ ವರ್ಗದ ಜನರಿಗೆ ಆರ್ಥಿಕ, ಸಾಮಾಜಿಕ, ಶೈಣಿಕ ಸಮಾನತೆ ದೊರೆಯುವಂತಾಗಬೇಕು ಎಂದು ಸಿಎಂ ಹೇಳಿದರು. ಪೌರಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು. ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತಾಬೇಕು. ಸಾರ್ವಜನಿಕರೂ ತಮ್ಮ ಪರಿಸರದ ಸ್ವಚ್ಛತೆ ಬಗ್ಗೆ ಸ್ವಯಂಪ್ರೇರಣೆಯಿಂದ ಗಮನಹರಿಸಬೇಕು ಎಂದು ತಿಳಿಸಿದರು.

ಪ್ರತ್ಯೇಕ ಬೂತ್​ ಸ್ಥಾಪನೆ: ಪೌರಕಾರ್ಮಿಕರ ಖಾಯಂ ವಿಚಾರದಲ್ಲಿ ಸಿಂಧುತ್ವದ ಗೊಂದಲ ಇರುವವರ ದಾಖಲೆ ಪರಿಶೀಲನೆಗೆ ಪ್ರತ್ಯೇಕ ಬೂತ್​ ಸ್ಥಾಪನೆ ಮಾಡಲಾಗುವುದು. ಪೌರ ಕಾರ್ಮಿಕರ ಅಭಿವೃದ್ಧಿಗಾಗಿ ಪಾಲಿಕೆ ಬಜೆಟ್​ನಲ್ಲಿ 600 ಕೋಟಿ ರೂ. ಮೀಸಲಿಡಲಾಗಿದೆ. ಒಂದೇ ಒಂದು ರೂಪಾಯಿ ಲಂಚ ಪಡೆಯದೇ ನಿಮ್ಮನ್ನು ಖಾಯಂ ಮಾಡಲಾಗಿದೆ. ಸಿಂಧುತ್ವ ವಿಚಾರದಲ್ಲಿ ಕೆಲವು ಗೊಂದಲಗಳಿರುವ ಕಾರಣಕ್ಕೆ ಕೆಲವರ ಕೆಲಸ ಖಾಯಂ ಆಗಿಲ್ಲ. ಈ ಬಗ್ಗೆ ಪ್ರತ್ಯೇಕವಾಗಿ ಬೂತ್​ ಆರಂಭಿಸಿ ದಾಖಲೆಗಳನ್ನು ಪರಿಶೀಲನೆ ಮಾಡಿಸಿ ನಿಮ್ಮೆಲ್ಲರಿಗೂ ನ್ಯಾಯ ಒದಗಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಆದ ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು. ಡಿ.ಸಾಲಪ್ಪ ವರದಿಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇವೆ. ಪೌರಕಾರ್ಮಿಕರ ಮಕ್ಕಳ ಭವಿಷ್ಯ ಗಟ್ಟಿಗೊಳಿಸಲು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ 700 ಕೋಟಿ ರೂ.ಮೀಸಲಿಡಲಾಗಿದೆ. ನೀವು ನಿವೃತ್ತಿಯಾದಾಗ 10 ಲಕ್ಷ ಹಣವನ್ನು ಡೆಪಾಸಿಟ್​ ಮಾಡಿ 6 ಸಾವಿರ ರೂ.ಪಿಂಚಣಿ ದೊರೆಯುವಂತೆ ಯೋಜನೆ ರೂಪಿಸಿದ್ದೇವೆ. ಆರೋಗ್ಯ, ಮಕ್ಕಳ ಶಿಣ, ಕೌಶಲಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. 2017ರಲ್ಲಿ ಸಿದ್ದರಾಮಯ್ಯ ಸರ್ಕಾರ 10 ಸಾವಿರ ಪೌರ ಕಾರ್ಮಿಕರನ್ನು ನೇರ ನೇಮಕ ಮಾಡಿತ್ತು. 2024-25ನೇ ಸಾಲಿನ ಬಜೆಟ್​ನಲ್ಲಿ ಆರೋಗ್ಯ ವಿಮೆ ಘೋಷಿಸಿದ್ದಾರೆ ಎಂದು ಸರ್ಕಾರದ ಕಾರ್ಯಕ್ರಮಗಳನ್ನು ವಿವರಿಸಿದರು.

ವಲಯವಾರು ಖಾಯಂ ಪೌರಕಾರ್ಮಿಕರ ವಿವರ

ವಲಯ                                    ಸಂಖ್ಯೆ

ದಕ್ಷಿಣ                                       3012

ಪಶ್ಚಿಮ                                    2564

ಪೂರ್ವ                                      2341

ಮಹದೇವಪುರ                          1369

ಆರ್​.ಆರ್​.ನಗರ                          1118

ಬೊಮ್ಮನಹಳ್ಳಿ                            1012

ಯಲಹಂಕ                                  808

ದಾಸರಹಳ್ಳಿ                                468

ಒಟ್ಟು                                     12,692

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net