

ವಿದ್ಯಾರ್ಥಿ ನಿಲಯದಲ್ಲಿ ಏರ್ ಕೂಲರ್(Air Cooler) ಅಳವಡಿಸಿಕೊಂಡಿದ್ದ 9 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ದಂಡ ಹಾಕಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಚಂದ್ರಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (CSA) ಹಾಸ್ಟೆಲ್‌ನಲ್ಲಿ ನಡೆದಿದೆ ಎಂದು ಮಂಗಳವಾರ ವರದಿಯಾಗಿದೆ.
ಹಾಸ್ಟೆಲ್‌ನಲ್ಲಿ ವಾಸಿಸುವ 9 ವಿದ್ಯಾರ್ಥಿಗಳಿಗೆ ಬಿಸಿಲಿನ ಬೇಗೆಯಲ್ಲಿ ಅನುಮತಿಯಿಲ್ಲದೆ ಕೂಲರ್‌ಗಳನ್ನು ಅಳವಡಿಕೊಂಡಿದ್ದರಿಂದ ದಂಡ ವಿಧಿಸಲಾಗಿದೆ ಎಂದು ವಿ.ವಿ ಹೇಳಿದೆ ಎಂದು ವರದಿ ಉಲ್ಲೇಖಿಸಿದೆ. ಇದೀಗ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಗೆದುಕೊಂಡ ಕ್ರಮದ ಬಗ್ಗೆ ಆಕ್ರೋಶವ್ಯಕ್ತವಾಗಿದೆ.
ವಾಸ್ತವವಾಗಿ, ವಿದ್ಯಾರ್ಥಿ ಹಾಸ್ಟೆಲ್ ಡೀನ್ರೊಬ್ಬರು, ವಿದ್ಯಾರ್ಥಿ ನಿಲಯದ ರೂಮ್ಗಳನ್ನು ಪರಿಶೀಲಿಸಿದಾಗ ಕೆಲ ರೂಮ್ ಗಳಲ್ಲಿ ವಿವಿ ಅನುಮತಿ ಇಲ್ಲದೆ, ಏರ್ ಕೂಲರ್‌ಗಳನ್ನು ಆಳವಡಿಸಿಕೊಂಡಿರುವುದು ಕಂಡು ಬಂದಿದೆ. ಈ ಹಿನ್ನೆಲೆ ವಿಶ್ವವಿದ್ಯಾನಿಲಯ ಆಡಳಿತವು ಕಠಿಣ ನಿಲುವನ್ನು ತೆಗೆದುಕೊಂಡು ಎಲ್ಲಾ ಒಂಬತ್ತು ವಿದ್ಯಾರ್ಥಿಗಳಿಗೆ ತಲಾ 10,000 ರೂ.ಗಳ ಆರ್ಥಿಕ ದಂಡವನ್ನು ವಿಧಿಸಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ವಿವಿ ಅನುಮತಿ ಕಡ್ಡಾಯ
ಹಾಸ್ಟೆಲ್ ನಿಯಮಗಳ ಪ್ರಕಾರ, ಹಾಸ್ಟೆಲ್‌ನಲ್ಲಿ ಕೂಲರ್‌ಗಳನ್ನು ಅಳವಡಿಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದಕ್ಕಾಗಿ 5000 ಶುಲ್ಕ ಪಾವತಿಸಬೇಕಾಗಿದೆ. ಈ ಅನುಮತಿ ಪ್ರತಿವರ್ಷ ಮಾ.1ರಿಂದ ನ.15ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇದನ್ನು ಉಲ್ಲಂಘನೆ ಮಾಡಿದಕ್ಕೆ ದಂಡ ವಿಧಿಸಲಾಗಿದೆ ಎಂದು ಹಾಸ್ಟೆಲ್ ಡೀನ್ ಮುಖೇಶ್ ಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್)