ಲಖನೌ: ತೋಳಗಳ ಭಯದಿಂದ ಉತ್ತರ ಪ್ರದೇಶದ ಕೆಲ ಗ್ರಾಮಗಳು ತತ್ತರಿಸಿವೆ. ರಾಜ್ಯದ ಮಹಾಸಿ ಉಪ ವಲಯದ ವ್ಯಾಪ್ತಿಯ ಬಹ್ರೈಚ್ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ತೋಳಗಳ ಹಿಂಡಿನ ದಾಳಿಯ ಭೀತಿಯಿಂದ ಜನರು ನಿದ್ರೆಯಿಲ್ಲದೆ, ಭಯದಿಂದ ದಿನದೂಡುತ್ತಿದ್ದಾರೆ.
ತೋಳಗಳ ಹಿಂಡು ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗಿ ಮನೆಗಳಲ್ಲಿ ಮಲಗಿದ್ದ ಮಕ್ಕಳನ್ನು ಹಿಡಿದು, ಕಾಡಿಗೆ ಎಳೆದೊಯ್ಯುತ್ತಿವೆ ಎಂದು ದೂರು ದಾಖಲಾಗಿದೆ. ಇದುವರೆಗೂ 8 ಮಕ್ಕಳ ಮೇಲೆ ತೋಳಗಳು ದಾಳಿ ನಡೆಸಿ ಕೊಂದಿವೆ. 45 ದಿನಗಳಲ್ಲಿ 8 ಮಕ್ಕಳು ಮತ್ತು ಓರ್ವ ಮಹಿಳೆ ಸೇರಿ 9 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ತೋಳಗಳ ದಾಳಿಯಿಂದ 26 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಭಾರತ-ನೇಪಾಳ ಗಡಿ ಜಿಲ್ಲೆ ಬಹ್ರೈಚ್‌ನಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಮಾತನಾಡಿ, ಕಳೆದ 40 ದಿನಗಳಲ್ಲಿ ಸುಮಾರು 30 ದಾಳಿಗಳು ನಡೆದಿವೆ. ಮನೆಗಳಲ್ಲಿ ಮಲಗಿರುವ ಮಕ್ಕಳ ಮೇಲೆ ತೋಳಗಳು ದಾಳಿ ಮಾಡಿ ಏಕಾಂತ ಸ್ಥಳಗಳಿಗೆ ಎಳೆದುಕೊಂಡು ಹೋಗುತ್ತಿವೆ. ಅರಣ್ಯ ಇಲಾಖೆ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ರಾತ್ರಿ ಗಸ್ತು ತಿರುಗುತ್ತಿದ್ದು, ಇದನ್ನ ಅರಿತ ತೋಳಗಳು ತಮ್ಮ ದಾಳಿಯ ಮಾದರಿಯನ್ನು ಬದಲಾಯಿಸಿವೆ ಎಂದು ಸಿಂಗ್ ತಿಳಿಸಿದರು.
ವರದಿಯ ಪ್ರಕಾರ ಜುಲೈ 17 ರಂದು ಮೊದಲ ದಾಳಿ ನಡೆದಿದ್ದು, ಬಹ್ರೈಚ್‌ನ ಮಹಾಸಿ ಬ್ಲಾಕ್ ಬಳಿಯ 30 ಹಳ್ಳಿಗಳ ಜನರು ಭಯದ ಭೀತಿಯಲ್ಲಿ ನಿತ್ಯವೂ ಬದುಕು ನಡೆಸುತ್ತಿದ್ದಾರೆ. ಮನೆಯಿಂದ ಹೊರಗೆ ಬರಲು ಸಹ ಜನರು ಹೆದರುತ್ತಿದ್ದಾರೆ. ಎಲ್ಲಿಗೆ ಹೋಗಬೇಕಾದರೂ ಗುಂಪು ಗುಂಪಾಗಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ತೋಳಗಳ ಭಯದಿಂದ ಏಕಾಂಗಿಯಾಗಿ ಇರಲು ಸಹ ಭಯಪಡುವಂತಾಗಿದೆ.
ಇನ್ನು ಥರ್ಮಲ್ ಡ್ರೋನ್‌ಗಳ ಸಹಾಯದಿಂದ ತೋಳಗಳನ್ನು ಹಿಡಿಯಲು ಉತ್ತರ ಪ್ರದೇಶದ ಅರಣ್ಯ ಇಲಾಖೆಯು ಒಂಬತ್ತು ಸದಸ್ಯರ ತಂಡವನ್ನು ನಿಯೋಜಿಸಿದ್ದು, ಇದುವರೆಗೆ ಹಿಡಿದ ಮೂರು ತೋಳಗಳನ್ನು ಲಖನೌ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್)
ವಿಶ್ವದಲ್ಲೇ ಬಲಿಷ್ಠ ತಂಡ ಕಟ್ಟಲು AI ಮೊರೆ ಹೋದ ಪಾಕ್! ಚಾಂಪಿಯನ್ಸ್ ಟ್ರೋಫಿಗೆ PCB ಮೆಗಾ ಪ್ಲಾನ್
ತಾನೇ ಮುಂದೆ ನಿಂತು ಪತಿಗೆ 2ನೇ ಮದುವೆ ಮಾಡಿಸಿದ ಪತ್ನಿ! ಕಾರಣ ತಿಳಿದ್ರೆ ನಿಮ್ಮ ಹುಬ್ಬೇರುವುದು ಖಚಿತ
ಅವರೆಲ್ಲ ನನ್ನಿಂದ ಅದನ್ನೇ ಬಯಸಿದ್ದರು! ಕಹಿ ಕ್ಷಣವನ್ನು ನೆನೆದು ಕಣ್ಣೀರಿಟ್ಟ ನಟಿ ಕೃತಿ ಶೆಟ್ಟಿ