

ಗುಜರಾತ್: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸೂರತ್ ರೈಲು ನಿಲ್ದಾಣದಲ್ಲಿ ತಮ್ಮ 9 ಲಕ್ಷ ರೂ. ಮೌಲ್ಯದ ಬ್ಯಾಗ್ ಕಳ್ಳತನವಾದ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ಬ್ಯಾಗ್‌ನಲ್ಲಿ ಬೆಲೆಬಾಳುವ ವಸ್ತುಗಳಿವೆ, ಅದನ್ನು ದಯಮಾಡಿ ಹಿಂತಿರುಗಿಸಿ ಎಂದು ಕಣ್ಣೀರಿಟ್ಟಿದ್ದ ಮಹಿಳೆ ಬೇಸರದಿಂದ ಮನೆಗೆ ತೆರಳಿದ್ದರು.
ಪ್ರಕರಣ ದಾಖಲಿಸಿಕೊಂಡ ಸೂರತ್ ರೈಲು ನಿಲ್ದಾಣದ ಆರ್‌ಪಿಎಫ್ ಅಧಿಕಾರಿಗಳು ಸಂಕಷ್ಟದಲ್ಲಿದ್ದ ಪ್ರಯಾಣಿಕರ ಅಳಲು ಕಂಡು ಬ್ಯಾಗ್ ವಾಪಾಸ್ ತಂದುಕೊಡುವ ಭರವಸೆ ವ್ಯಕ್ತಪಡಿಸಿದ್ದರು. ಆದ್ರೆ, ಘಟನೆ ನಡೆದು ಮೂರು ನಾಲ್ಕು ದಿನಗಳು ಕಳೆದರೂ ಬ್ಯಾಗ್ ಸುದ್ದಿ ಕೇಳದ ಕಾರಣ ಮಹಿಳೆ ಭರವಸೆ ಇಲ್ಲದೆ ಎಂದಿನಂತೆ ತಮ್ಮ ಕೆಲಸದತ್ತ ಗಮನಹರಿಸಿದ್ದರು.
ಆದ್ರೆ, ಈ ಮಧ್ಯೆ ದಿಢೀರ್ ಎಂಬಂತೆ 9 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಪ್ರಯಾಣಿಕರ ಬ್ಯಾಗ್ ಅನ್ನು ಆರ್‌ಪಿಎಫ್ ಸಿಬ್ಬಂದಿಗಳಾದ ರಾಜನ್ ಸಂದವ್, ಸಿಟಿ ಸುನಿಲ್ ಢಾಕಾ ಮತ್ತು ಪವನ್ ಕುಮಾರ್ ತಪಾಸಣೆಯ ರೌಂಡ್ಸ್ಗಾಗಿ ತೆರಳಿದಾಗ ರೆಸ್ಟ್ರೂಮ್ನಲ್ಲಿ ಬಿದ್ದಿದ್ದ ಮಹಿಳೆಯ ಬ್ಯಾಗ್ ಮೇಲೆ ಕಾಲಿಟ್ಟು, ಎಡವಿ ಬಿದ್ದಿದ್ದಾರೆ. ಕೂಡಲೇ ಅದನ್ನು ಪರಿಶೀಲಿಸಿದಾಗ ಅದು ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಪ್ರಯಾಣಿಕರದ್ದೇ ಇರಬಹುದು ಎಂದು ತಕ್ಷಣ ಆಕೆಗೆ ಕರೆಮಾಡಿ ಬರಲು ಹೇಳಿದ್ದಾರೆ.
ನಿಯಮಗಳನ್ನು ಅನುಸರಿಸಿದ ಆರ್‌ಪಿಎಫ್ ತಂಡವು ಹೆಚ್ಚಿನ ತನಿಖೆಗಾಗಿ ಬ್ಯಾಗ್ ಅನ್ನು ಆರ್‌ಪಿಎಫ್ ಎಎಸ್‌ಐ ಸದಾನಂದ್ ಶುಕ್ಲಾ ಅವರಿಗೆ ಹಸ್ತಾಂತರಿಸಿದೆ. ತದನಂತರ ಆರ್‌ಪಿಎಫ್ ಕಚೇರಿಗೆ ಆಗಮಿಸಿದ ಮಹಿಳೆ ಮಂಜುಬೆನ್ ರಮೇಶ್ ಕುಮಾರ್ ಜೈನ್, ತಾನು ಅಹಮದಾಬಾದ್‌ನಿಂದ ಸೂರತ್‌ಗೆ ಹೋಗುವಾಗ ನನ್ನ ಬ್ಯಾಗ್ ಕಳ್ಳತನವಾಗಿತ್ತು ಎಂದು ಘಟನೆಯನ್ನು ವಿವರಿಸಿದ್ದಾರೆ.
ಬ್ಯಾಗ್‌ನಲ್ಲಿ ಏನೇನಿತ್ತು ಎಂದು ಮಹಿಳೆ ಸರಿಯಾಗಿ ವಿವರಿಸಿದ ಬಳಿಕ ಅಧಿಕಾರಿಗಳು ಅವರಿಗೆ ಬ್ಯಾಗ್ ಹಸ್ತಾಂತರಿಸಿದ್ದಾರೆ. 4.40 ಲಕ್ಷ ರೂ. ಮೌಲ್ಯದ ಒಂದು ಜೋಡಿ ಚಿನ್ನದ ಬಳೆಗಳು, 1.20 ಲಕ್ಷ ರೂ. ಮೌಲ್ಯದ ಎರಡು ಚಿನ್ನದ ಉಂಗುರಗಳು, 80,000 ಮೌಲ್ಯದ ಒಂದು ಜೋಡಿ ಕಿವಿಯೋಲೆಗಳು, 70,000 ಮೌಲ್ಯದ ಚಿನ್ನದ ಸರ, ಮತ್ತು 4,760 ನಗದು ಬ್ಯಾಗ್‌ನಲ್ಲಿ ಪತ್ತೆಯಾಗಿದೆ,(ಏಜೆನ್ಸೀಸ್).