

ಅಮೃತಸರ: ನಿಂತಿದ್ದ ಕ್ಯಾಂಟರ್ಗೆ ಪಿಕ್ಅಪ್ ವಾಹನವೊಂದು (Pickup Vehicle) ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಮೃತಪಟ್ಟು, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಂಜಾಬ್ನ ಫಿರೋಜ್ಪುರದಲ್ಲಿ ನಡೆದಿದೆ.
ಮೃತರನ್ನು ಗೋಬಿಂದ್, ವಿಕ್ಕಿ, ರವಿ, ಸುಖ್ವಿಂದರ್, ಜಸ್ವಂತ್, ಬಗ್ಗಾ, ಚಂದ್ ಸಿಂಗ್, ಮಲ್ಕಿತ್ ಎಂದು ಗುರುತಿಸಲಾಗಿದ್ದು, ಇನ್ನೋರ್ವರ ಗುರುತು ಪತ್ತೆಯಾಗಿಲ್ಲ. ಫಿರೋಜ್ಪುರದ ಗುರುಹರ್ಸಹೈ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಪಿಕ್ಅಪ್ ವಾಹನದಲ್ಲಿ (Pickup Vehicle) 25-30 ಜನ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಣಧೀರ್ ಕುಮಾರ್, ಫಿರೋಜ್ಪುರ-ಫಜಿಲ್ಕಾ ರಸ್ತೆಯಲ್ಲಿ ಟ್ರಕ್ ಮತ್ತು ಮಹೀಂದ್ರಾ ಪಿಕಪ್ ವಾಹನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಸುಕಿನ ಜಾವ ಗೋಲುಕಾ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ಪಿಕ್ಅಪ್ ವಾಹನದಲ್ಲಿದ್ದವರು ಜಲಾಲಾಬಾದ್ಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗಾಯಾಳುಗಳ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಯ ವೆಚ್ಚವನ್ನು ಜಿಲ್ಲಾಡಳಿತದ ವತಿಯಿಂದ ಭರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಣಧೀರ್ ಕುಮಾರ್ ತಿಳಿಸಿದ್ದಾರೆ.