ನವದೆಹಲಿ: ಜನವರಿಗೂ ಮುಂಚೆ ಚೀನಾ ಸೇರಿ ಕೆಲ ರಾಷ್ಟ್ರಗಳಲ್ಲಿ ಮಾತ್ರ ಕರೊನಾ ಕಾಣಿಸಿಕೊಂಡಿತ್ತು. ಆದರೆ, ಈಗ ಕರೊನಾ ವೈರಸ್ ವ್ಯಾಪಿಸದ ರಾಷ್ಟ್ರಗಳೇ ಇಲ್ಲ ಎನ್ನುವಂಥ ಪರಿಸ್ಥಿತಿ. ಕಳೆದ ಆರು ತಿಂಗಳಿನಿಂದ ಈ ವೈರಸ್ ನಿರ್ಮೂಲನೆಗೆ ಜಾಗತಿಕ ಯುದ್ಧವೇ ನಡೆಯುತ್ತಿದೆ. ಈ ಯುದ್ಧದಲ್ಲಿ ಹಲವು ರಾಷ್ಟ್ರಗಳು ವಿಜಯೋತ್ಸಾಹದ ಹುಮ್ಮಸ್ಸಿನಲ್ಲಿವೆ.
ಕರೊನಾದಿಂದ ಮುಕ್ತವಾಗಿರುವುದಾಗಿ 9 ರಾಷ್ಟ್ರಗಳು ಘೋಷಿಸಿವೆ. ಇಲ್ಲಿ ಕರೊನಾದ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ. ಕನಿಷ್ಠ 15 ದಿನಗಳಿಂದ ಹೊಸ ಪ್ರಕರಣಗಳು ಕೂಡ ವರದಿಯಾಗಿಲ್ಲ. ಕಳೆದ ಎರಡು ದಿನಗಳ ಹಿಂದಷ್ಟೇ ನ್ಯೂಜಿಲೆಂಡ್ ಕರೊನಾಮುಕ್ತ ರಾಷ್ಟ್ರವೆಂದು ಘೋಷಿಸಿಕೊಂಡಿತ್ತು. 1500 ಪ್ರಕರಣಗಳು ಇಲ್ಲಿ ವರದಿಯಾಗಿದ್ದವು. ಆ ಪೈಕಿ 22 ಜನರು ಮೃತಪಟ್ಟಿದ್ದರು. ಸದ್ಯ ಇಲ್ಲಿ ಕೋವಿಡ್ನ ಸಕ್ರಿಯ ಪ್ರಕರಣಗಳು ಇಲ್ಲ.
ಇದನ್ನೂ ಓದಿ; ಲಾಕ್ಡೌನ್ ಅವಧಿಯಲ್ಲಿ ಜನ ಊಟಕ್ಕಿಂತ ಈ ಬಿಸ್ಕೆಟ್ ತಿಂದದ್ದೇ ಹೆಚ್ಚು…! 80 ವರ್ಷಗಳಲ್ಲಿಯೇ ಅತಿ ಹೆಚ್ಚು ಮಾರಾಟ ದಾಖಲೆ
ಪ್ರಾರ್ಥನೆಯಿಂದಲೇ ಕರೊನಾ ದೂರಾಗಿದೆ ಎಂದು ತಾಂಜೇನಿಯಾ ಘೋಷಿಸಿಕೊಂಡಿದೆ. ದೇವರ ದಯೆಯಿಂದ ನಮ್ಮ ದೇಶದಲ್ಲಿ ಕರೊನಾ ನಿರ್ಮೂಲನೆಯಾಗಿದೆ ಎಂದು ತಾಂಜಾನಿಯಾ ಅಧ್ಯಕ್ಷ ಜಾನ್ ಮಗಾಫುಲಿ ಹೇಳಿದ್ದಾರೆ. ಇಲ್ಲಿ 509 ಜನರಲ್ಲಿ ಕರೊನಾ ಕಾಣಿಸಿಕೊಂಡಿತ್ತು. ಬಳಿಕ ಸಾರ್ವಜನಿಕವಾಗಿ ಮಾಹಿತಿ ನೀಡುವುದನ್ನೇ ನಿಲ್ಲಿಸಲಾಗಿತ್ತು. ಇದಾಗಿ ಆರು ವಾರಗಳ ಬಳಿಕ ಕರೊನಾಮುಕ್ತವೆಂದು ಘೋಷಿಸಿಕೊಂಡಿದೆ. ಆದರೆ ನೆರೆಯ ರಾಷ್ಟ್ರಗಳು ಈ ಬಗ್ಗೆ ಗುಮಾನಿ ವ್ಯಕ್ತಪಡಿಸಿವೆ.
ತನ್ನ ದೇಶದಲ್ಲಿ ಎಲ್ಲ 12 ಕರೊನಾ ಸೋಂಕಿತರು ಗುಣವಾಗಿದ್ದಾರೆ ಎಂದು ಜೂನ್ 6ರಂದು ವ್ಯಾಟಿಕನ್ ತಿಳಿಸಿದೆ. ಕರೊನಾದಿಂದಾಗಿ ಇಲ್ಲಿ ಯಾರೂ ಮೃತಪಟ್ಟಿಲ್ಲ.
ಇದನ್ನೂ ಓದಿ; ಹೊತ್ತಿ ಉರಿಯುತ್ತಿರುವ ತೈಲ ಬಾವಿ ಬೆಂಕಿ ನಂದಿಸಲು ಒಂದು ತಿಂಗಳೇ ಬೇಕು….!
ದ್ವೀಪರಾಷ್ಟ್ರ ಫಿಜಿಯಲ್ಲಿದ್ದ ಎಲ್ಲ 18 ಸೋಂಕಿತರು ಕೂಡ ಚೇತರಿಸಿಕೊಂಡಿದ್ದಾರೆ. ಕಳೆದ 45 ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಕಾಣಿಸಿಕೊಂಡಿಲ್ಲ ಎಂದು ಪ್ರಧಾನಿ ಫ್ರಾಂಕ್ ಬೈನಿಮರಾಮ ಹೇಳಿದ್ದಾರೆ. 9 ಲಕ್ಷ ಜನಸಂಖ್ಯೆ ಇರುವ ಈ ದೇಶದಲ್ಲಿ ಲಾಕ್ಡೌನ್ ವಿಧಿಸಲಾಗಿತ್ತು.
ಮೊದಲ ಪ್ರಕರಣ ವರದಿಯಾದ 69 ದಿನಗಳ ಬಳಿಕ ಕರೊನಾಮುಕ್ತ ಎಂದು ಮಾಂಟೆನ್ಗ್ರೊ ಪ್ರಕಟಿಸಿದೆ. ಇಲ್ಲಿ 324 ಕೇಸ್ಗಳಿದ್ದವು. ಇನ್ನು, ಶಿಷೆಲ್ಸ್ನಲ್ಲಿದ್ದ 11, ಸೇಂಟ್ ಕಿಟ್ಸ್ ಆ್ಯಂಡ್ ನೇವಿಸ್ನ 15, ತಿಮೋರ್ ಲೆಸ್ಟ್ನ 24 ಹಾಗೂ ಪಾಪುವಾ ನ್ಯೂಗಿನಿಯ 24 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆಯಾ ದೇಶಗಳು ತಿಳಿಸಿವೆ. ಕೋವಿಡ್ಮುಕ್ತವಾಗಿರುವುದಾಗಿ ಘೋಷಿಸಿಕೊಂಡಿವೆ.
ಹುಟ್ಟುಹಬ್ಬದಂದೇ ಕರೊನಾಗೆ ಬಲಿಯಾದ ಶಾಸಕ; ಜನಪ್ರತಿನಿಧಿ ಸಾವಿನ ಮೊದಲ ಪ್ರಕರಣ