ಏಳು ತಿಂಗಳಲ್ಲಿ 86 ಜನರಿಗೆ ಎಚ್‌ಐವಿ ಸೋಂಕು

Red_Ribbon
Published on

ಕಾರವಾರ: ನಿರಂತರ ಜಾಗೃತಿಯ ಪರಿಣಾಮ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಸೋಂಕು ಹರಡುವ ಪ್ರಮಾಣ ಶೇ. 0.01 ಕ್ಕಿಂತ ಇಳಿಕೆ ಕಂಡಿದೆ.
ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನಾಚರಣೆಯ ಹಿನ್ನೆಲೆಯಲ್ಲಿ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಎಚ್‌ಐವಿ ಏಡ್ಸ್ ಕುರಿತ ಮಾಹಿತಿ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಕಳೆದ ಏಳು ತಿಂಗಳಲ್ಲಿ 86 ಎಚ್‌ಐವಿ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. 2022-23 ನೇ ಸಾಲಿನಲ್ಲಿ 105 ಸೋಂಕಿತರನ್ನು ಪತ್ತೆ ಹಚ್ಚಲಾಗಿತ್ತು ಎಂದು ಜಿಲ್ಲಾ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಮಾಹಿತಿ ನೀಡಿದೆ. ರಾಜ್ಯದಲ್ಲಿ ಎಚ್‌ಐವಿ ಸೋಂಕು ಹರಡುವ ಪ್ರಮಾಣ ಶೇ. 0.04 ರಷ್ಟಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಅತಿ ಕಡಿಮೆ ಪ್ರಕರಣಗಳು ಕಂಡುಬರುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 13 ಐಸಿಟಿಸಿ ಕೇಂದ್ರಗಳಿದ್ದು, ಶಿರಸಿ ಹಾಗೂ ಕಾರವಾರದಲ್ಲಿ ಎಆರ್‌ಟಿ ಕೇಂದ್ರಗಳಿವೆ. 2 ಡಿಎಸ್‌ಆರ್‌ಸಿ ಕೇಂದ್ರಗಳಿವೆ. 3 ಎನ್‌ಜಿಒಗಳು ಈ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿವೆ. 2022-23 ರಲ್ಲಿ ಜಿಲ್ಲೆಯಲ್ಲಿ 79213 ಜನರನ್ನು ಪರೀಕ್ಷೆ ಮಾಡಲಾಗಿ 99 ಸೋಂಕಿತರು ಪತ್ತೆಯಾಗಿದ್ದರು. ಅದೇ ಅವಧಿಯಲ್ಲಿ 23,480 ಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸಿ 6 ಸೋಂಕಿತರು ಪತ್ತೆಯಾಗಿದ್ದರು. 2008 ರಿಂದ ಇದುವರೆಗೆ ಜಿಲ್ಲೆಯಲ್ಲಿ 3488 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ 1809 ಜನ ಸದ್ಯ ಎಆರ್‌ಟಿ ಕೇಂದ್ರಗಳಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net