

ಕಾರವಾರ: ಮಾಹಿತಿ ಸಂಗ್ರಹ, ಸರ್ವೇ, ಸಂವಹನ ಮುಂತಾದ ಕಾರ್ಯಗಳಿಗೆ ರಾಕೆಟ್ ಮೂಲಕ ಉಪಗ್ರಹ ಉಡಾವಣೆ ಮಾಡಲಾಗುತ್ತದೆ. ಕಾರವಾರದ ಮಾಜಾಳಿಯಲ್ಲಿ ಸಾವಿರಾರು ಜನರ ಬೇಡಿಕೆಗಳನ್ನು ಭಕ್ತಿಯಿಂದ ತುಂಬಿ ನಭಕ್ಕೆ ರಾಕೆಟ್ ಹಾರಿಬಿಡಲಾಯಿತು.
ಬೆಳಗ್ಗೆ ಒಂದು ಹಾಗೂ ಸಾಯಂಕಾಲ ಒಂದು ರಾಕೆಟ್ಗಳು ನೂರಾರು ಜನರ ಶಿಳ್ಳೆ ಚಪ್ಪಾಳೆಗಳ ನಡುವೆ ಹೊಗೆ ಚುಮ್ಮುತ್ತ ಆಕಾಶಕ್ಕೆ ಹಾರಿ ಮಾಯವಾದವು.!! ಇದು ಖರೆ ರಾಕೆಟ್ ಉಡಾವಣೆಯ ಸುದ್ದಿಯಲ್ಲ. ಮಾಜಾಳಿಯಲ್ಲಿ ನಡೆಯುವ ಒಂದು ವಿಶಿಷ್ಟ ಧಾರ್ಮಿಕ ಆಚರಣೆಯ ಚಿತ್ರಣ.
ಕಾರ್ತಿಕ ಪೂರ್ಣಿಮೆಯ ಅಂಗವಾಗಿ ಇಲ್ಲಿನ ಮಾಜಾಳಿಯಲ್ಲಿ ಆಕಾಶಕ್ಕೆ ಬೃಹತ್ ಬುಟ್ಟಿಯನ್ನು ಗುರುವಾರ ಹಾರಿ ಬಿಡಲಾಯಿತು.
ಸುಮಾರು 8 ಅಡಿ ಎತ್ತರದ, ಐದು ಅಡಿ ವ್ಯಾಸದ ಸಿಲಿಂಡರ್ ಆಕೃತಿಯ ಕೇಸರಿ ಕಾಗದದಿಂದ ಮಾಡಿದ ಬಲೂನಿನಲ್ಲಿ ಹೊಗೆ ತುಂಬಿ ಹಾರಿ ಬಿಡಲಾಯಿತು. ಸ್ಥಳೀಯ ಭಾಷೆಯಲ್ಲಿ `ವಾಫರ್' ಎಂದು ಕರೆಯುವ ಈ ಹೊಗೆ ಬಲೂನನ್ನು ಕಾರ್ತಿಕ ಹುಣ್ಣಿಮೆಯಂದು ಆಕಾಶಕ್ಕೆ ಹಾರಿ ಬಿಡುವುದರಿಂದ ರೋಗ, ರುಜಿನಗಳು ಬರುವುದಿಲ್ಲ ಎಂಬುದು ಇಲ್ಲಿಯ ಜನರ ನಂಬಿಕೆ.
ಸ್ಥಳೀಯ ಭಕ್ತರು ಹಣ ಕೂಡಿಸಿ ಕಾಗದದ ಬಲೂನು ತಯಾರಿಸುತ್ತಾರೆ. ಬಲೂನಿನ ನಡುವೆ ಎಣ್ಣೆಯಲ್ಲಿ ಅದ್ದಿದ ಬಟ್ಟೆ ಕಟ್ಟಿ ಅದಕ್ಕೆ ಬೆಂಕಿ ಹಚ್ಚಲಾಗುತ್ತದೆ. ಹೊಗೆ ತುಂಬುತ್ತಿದ್ದಂತೆ ಬಲೂನು ರಾಕೆಟ್ ಮಾದರಿಯಲ್ಲಿ ಆಕಾಶದತ್ತ ಚಿಮ್ಮುತ್ತದೆ. ಬೆಳಗ್ಗೆ ವಾಂಗಡದ ಗ್ರಾಮ ಪುರುಷ ದೇವಸ್ಥಾನಲ್ಲಿ ಈ ಪ್ರಕ್ರಿಯೆ ನಡೆದರೆ ಸಾಯಂಕಾಲ ರಾಮನಾಥ ದೇವರ ಸನ್ನಿಽಯಲ್ಲಿ ವಾಫರ್ ಹಾರಿ ಬಿಡಲಾಯಿತು. ಭಕ್ತರು ಹರ, ಹರ ಮಹಾದೇವ ಹರ್ಷೋದ್ಗಾರ ಮಾಡಿದರು.