

ಎರಡನೇ ಮಹಾಯುದ್ಧ ಕಾಲದಿಂದಲೂ ಬದುಕುಳಿದಿದ್ದ 84 ವರ್ಷದ ಮೊಸಳೆಯೊಂದು ಮಾಸ್ಕೋ ಮೃಗಾಲಯದಲ್ಲಿ ಮೃತಪಟ್ಟಿದೆ. ಇದು ಒಂದು ಕಾಲದಲ್ಲಿ ಹಿಟ್ಲರ್‌ಗೆ ಸೇರಿತ್ತು ಎಂದು ನಂಬಲಾಗಿದೆ.
''ಅಡಾಲ್ಫ್ ಹಿಟ್ಲರ್‌ಗೆ ಸೇರಿದ್ದು ಎಂದು ನಂಬಲಾಗಿದ್ದ, ಅಂದಾಜು 84 ವರ್ಷ ವಯಸ್ಸಿನ ಶನಿ ಎಂಬ ಹೆಸರಿನ ಮೊಸಳೆ ಮಾಸ್ಕೋ ಮೃಗಾಲಯದಲ್ಲಿ ಶುಕ್ರವಾರ ಮೃತಪಟ್ಟಿದೆ'' ಎಂದು ಮೃಗಾಲಯ ತಿಳಿಸಿದೆ.
ಮೃಗಾಲಯ ತಿಳಿಸುವಂತೆ, ಅಮೆರಿಕದಲ್ಲಿ ಜನಿಸಿದ ಶನಿ ಎಂಬ ಹೆಸರಿನ ಮೊಸಳೆಯನ್ನು ನಂತರ ಬರ್ಲಿನ್ ಮೃಗಾಲಯಕ್ಕೆ ಕಳುಹಿಸಲಾಯಿತು, 1943ರಲ್ಲಿ ಬರ್ಲಿನ್ ಮೃಗಾಲಯದ ಮೇಲೆ ಬಾಂಬ್ ದಾಳಿಯಾದಾಗ ಅಲ್ಲಿಂದ ಅದು ನಾಪತ್ತೆಯಾಗಿತ್ತು. ಬ್ರಿಟಿಷ್ ಸೈನಿಕರು ಅದನ್ನು ಕಂಡು, ಸೋವಿಯತ್ ಒಕ್ಕೂಟಕ್ಕೆ ಕೊಡುವವರೆಗೂ, ಅಂದರೆ 1946 ರವರೆಗೂ ಈ ಮೊಸಳೆಯ ಇರುವಿಕೆ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.
ಯಾರಿಗೂ ಕಾಣಸಿಗದಂತೆ ಅದು ನಾಪತ್ತೆಯಾಗಿದ್ದಾಗ ಅದು ಹಿಟ್ಲರ್ನ ಬಳಿ ಇದೆ ಮತ್ತು ಬರ್ಲಿನ್ ಮೃಗಾಲಯದಲ್ಲಿ ಇಲ್ಲ ಎಂಬ ಅಂತೆ ಕಂತೆಗಳು ಹುಟ್ಟಿಕೊಂಡಿದ್ದವು ಎಂದು ಮೃಗಾಲಯವು ಹೇಳಿಕೆಯಲ್ಲಿ ತಿಳಿಸಿದೆ.