ಅಂತೂ ಸಿಕ್ಕಿಬಿದ್ಳು ಸರ್ಕಾರವನ್ನೇ ಯಾಮಾರಿಸಿದ ಶ್ರೀಮಂತ ಅಜ್ಜಿ!

swissbank
Published on

ಮುಂಬೈ: ಈಕೆ ಅಂತಿಂಥ ಅಜ್ಜಿಯಲ್ಲ. ವಯಸ್ಸು 80 ಆದರೂ ಇಷ್ಟು ವರ್ಷ ಸರ್ಕಾರವನ್ನು ಯಾಮಾರಿಸುತ್ತಿದ್ದ ಈಕೆ ಸ್ವಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾರೆ. ಅದರಲ್ಲಿ 196 ಕೋಟಿ ರೂಪಾಯಿಗಳನ್ನು ಡಿಪಾಸಿಟ್‌ ಇಟ್ಟಿದ್ದಾಳೆ! ಇದೀಗ ಸಿಕ್ಕಿಬಿದ್ದಿದ್ದು, ದಂಡ ಕಟ್ಟುವಂತಾಗಿದೆ.

ಚಿಕ್ಕ ನೌಕರಿಯಲ್ಲಿದ್ದ ತನಗೆ ಮಾಸಿಕ ಕೇವಲ 14 ಸಾವಿರ ರೂಪಾಯಿ ಆದಾಯ ಬರುತ್ತಿತ್ತು ಎಂದು ಘೋಷಿಸಿಕೊಂಡಿದ್ದ ರೇಣು ಥರಣಿ ಎಂಬ ಅಜ್ಜಿ, ತೆರಿಗೆಯನ್ನು ಕಟ್ಟದಿರುವ ಹಲವಾರು ಕುತಂತ್ರ ಬುದ್ಧಿಯನ್ನು ಉಪಯೋಗಿಸಿದ್ದರೂ, ಇದೀಗ ಸಿಕ್ಕಿಹಾಕಿಕೊಂಡಿದ್ದಾರೆ. ಅಘೋಷಿತ ಹಣಕ್ಕೆ ದಂಡ ಮತ್ತು ತೆರಿಗೆ ಪಾವತಿಸುವಂತೆ ಈಕೆಗೆ ಮುಂಬೈನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ನಿರ್ದೇಶಿಸಿದೆ. ಸರ್ಕಾರವನ್ನು ವಂಚಿಸಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದೆ.

ತಾನು ಅನಿವಾಸಿ ಭಾರತೀಯಳು ಎಂದು ಹೇಳಿಕೊಂಡಿದ್ದ ರೇಣು, ಬೆಂಗಳೂರಿನ ವಿಳಾಸ ನೀಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೂ ಸಫಲವಾಗದೇ ಇದೀಗ ಸಿಕ್ಕಿಬಿದ್ದಿದ್ದಾರೆ.

ಸ್ವಿಜಲೆಂಡ್‌ನಲ್ಲಿರುವ ಎಚ್‌ಎಸ್‌ಬಿಸಿ ಜಿನೀವಾ ಶಾಖೆಯಲ್ಲಿ 2004ಲ್ಲಿ ಥರಣಿ ಫ್ಯಾಮಿಲಿ ಟ್ರಸ್ಟ್‌ ಹೆಸರಲ್ಲಿ ಖಾತೆಯೊಂದನ್ನು ತೆರೆಯಲಾಗಿತ್ತು. ಈ ಖಾತೆಗೆ ಕೇಮನ್‌ ಐಲ್ಯಾಂಡ್‌ನ (ಇದು ಕಾಳಧನಿಕರಿಗೆ ತೆರಿಗೆ ವಂಚಿಸಲು ಸ್ವರ್ಗವೆಂದೇ ಹೆಸರಾಗಿರುವ ಪ್ರದೇಶ) ಜಿಡಬ್ಲ್ಯು ಇನ್‌ವೆಸ್ಟ್‌ಮೆಂಟ್‌ ಕಂಪನಿಯಿಂದ 196 ಕೋಟಿ ರೂಪಾಯಿ ವರ್ಗಾಯಿಸಲಾಗಿತ್ತು.

2005-06ರಲ್ಲಿ ರೇಣು ತಾನು ಸಲ್ಲಿಸಿರುವ ಆದಾಯ ತೆರಿಗೆ ಮಾಹಿತಿಯಲ್ಲಿ ರೇಣು ಸ್ವಿಸ್‌ ಬ್ಯಾಂಕ್‌ ಖಾತೆಯ ಮಾಹಿತಿ ನೀಡಿರಲಿಲ್ಲ. ತಮ್ಮ ವಾರ್ಷಿಕ ಆದಾಯ 1.7 ಲಕ್ಷ ಎಂದಷ್ಟೇ ನಮೂದಿಸಿದ್ದರು. ಆದರೆ ಸ್ವಿಸ್‌ ಬ್ಯಾಂಕ್‌ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಿಕ್ಕಿತ್ತು.

ಇದು ನಡೆದದ್ದು 2014ರಲ್ಲಿ. ಇಲಾಖೆಯ ನೋಟಿಸ್‌ಗೆ ಉತ್ತರಿಸಿದ್ದ ರೇಣು, ಸ್ವಿಸ್‌ ಬ್ಯಾಂಕ್‌ನಲ್ಲಿ ಯಾವುದೇ ಖಾತೆ ಹೊಂದಿಲ್ಲ. ಇವೆಲ್ಲಾ ಸುಳ್ಳು. ನಾನು ಜಿಡಬ್ಲ್ಯು ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ನಲ್ಲಿ ಷೇರುದಾರರಾಗಲೀ, ನಿರ್ದೇಶಕರಾಗಲಿ ಆಗಿಲ್ಲ ಎಂದಿದ್ದರು. ಜತೆಗೆ, ಬೆಂಗಳೂರಿನ ನಿವಾಸಿಯಾಗಿರುವುದಾಗಿಯೂ ದಾಖಲೆ ಸಲ್ಲಿಸಿದ್ದರು.

ಈ ಪ್ರಕರಣ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣದ ಮುಂದೆ ಬಂದಿತ್ತು. ಆಗ ರೇಣು ‌ಅನೇಕ ರೀತಿಯಲ್ಲಿ ನುಣುಚಿಕೊಳ್ಳಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಇದೀಗ ಇವರು 196 ಕೋಟಿ ರು. ಅಘೋಷಿತ ಹಣಕ್ಕೆ ತೆರಿಗೆ ಮತ್ತು ದಂಡವನ್ನು ಪಾವತಿಸಬೇಕು ಎಂದು ನ್ಯಾಯಾಧೀಕರಣ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net