

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಭಾಸಿ ಸಮೀಪದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬುಧವಾರ ಇನೋವಾ ಕಾರಿಗೆ ಇನ್ಸುಲೇಟರ್ ಲಾರಿ ಡಿಕ್ಕಿಯಾಗಿ ಇನೋವಾದಲ್ಲಿದ್ದ 7 ಮಂದಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಾರಿ ಚಾಲಕನೂ ಗಾಯಗೊಂಡಿದ್ದಾನೆ.
ಕೇರಳ ಮೂಲದ ಏಳು ಮಂದಿ ಇನೋವಾ ಕಾರಿನಲ್ಲಿ ಪ್ರವಾಸ ಬಂದಿದ್ದು, ಕುಂದಾಪುರದಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಕುಂಭಾಸಿ ಚಂಡಿಕಾ ದುರ್ಗಾಪರಮೇಶ್ವರಿ ದೇವಳಕ್ಕೆ ತೆರಳಲು ಗೋಪುರ ಬಳಿ ರಿವರ್ಸ್ ತೆಗೆಯುತ್ತಿದ್ದ ಸಂದರ್ಭ ಗೋವಾ ಕಡೆಯಿಂದ ಮೀನು ತುಂಬಿದ್ದ ಲಾರಿ ಕಾರಿನ ಹಿಂಬದಿಗೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಕ್ಕೆ ಕಾರು ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.