ಕನ್ಹಯ್ಯ ಲಾಲ್​ ಕೊಲೆ ಪ್ರಕರಣ; ಇನ್ನೊಬ್ಬ ಆರೋಪಿಯ ಬಂಧನ..

Kanhaiya Lal
Published on

ರಾಜಸ್ಥಾನ: ಟಿ.ವಿ. ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೊಲೆಗೀಡಾಗಿದ್ದ ಕನ್ಹಯ್ಯ ಲಾಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ರಾಜಸ್ಥಾನದ ಉದಯಪುರದ ಮಲ್ಡಾಸ್ ಸ್ಟ್ರೀಟ್​ನಲ್ಲಿರುವ ಟೈಲರ್ ಕನ್ಹಯ್ಯ ಲಾಲ್​ ಅಂಗಡಿಗೆ ಜೂ.28ರಂದು ಬಟ್ಟೆ ಹೊಲಿಸಲು ಕೊಡುವವರ ಸೋಗಿನಲ್ಲಿ ಬಂದಿದ್ದ ಹಂತಕರಿಬ್ಬರು, ಕೆಲವೇ ಕ್ಷಣಗಳಲ್ಲಿ ಕನ್ಹಯ್ಯ ಲಾಲ್ ಮೇಲೆ ಹಲ್ಲೆ ಮಾಡಿ, ತಲೆ ಕತ್ತರಿಸಿ ಪರಾರಿಯಾಗಿದ್ದರು. ಬಳಿಕ ವಿಡಿಯೋ ಮಾಡಿ ಕೃತ್ಯದ ಕುರಿತು ಹೇಳಿಕೊಂಡಿದ್ದಲ್ಲದೆ ಪ್ರಧಾನಿ ಮೋದಿಗೂ ಜೀವ ಬೆದರಿಕೆಯೊಡ್ಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಾದ ಮೊಹಮ್ಮದ್ ರಿಯಾಜ್​ ಅಟ್ಟರಿ ಮತ್ತು ಗೌಸ್ ಮೊಹಮ್ಮದ್ ಅವರನ್ನು ಅಂದೇ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದ ಪೊಲೀಸರು ಇದುವರೆಗೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಏಳನೇ ಆರೋಪಿ ಫರ್ಹಾದ್ ಮೊಹಮ್ಮದ್ ಶೇಖ್ (31) ಎಂಬಾತನನ್ನು ವಶಪಡಿಸಿಕೊಳ್ಳಲಾಗಿದೆ. ಈತ ಪ್ರಮುಖ ಆರೋಪಿಗಳಿಬ್ಬರಲ್ಲಿ ಒಬ್ಬನಾದ ರಿಯಾಜ್ ಅಟ್ಟರಿ ನಿಕಟವರ್ತಿ ಆಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net