ಹರಿಪ್ರಸಾದ್ ನಂದಳಿಕೆ ಕಾರ್ಕಳ
ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಹೆಬ್ರಿ ತಾಲೂಕು ಸೇರಿದಂತೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಾರ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಏಳು ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಹಗಲು-ರಾತ್ರಿ ಮೂರು ಪಾಳಿಯಲ್ಲಿ ಸಿಬ್ಬಂದಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.
ಹೆಬ್ರಿ ಹಾಗೂ ಕಾರ್ಕಳ ತಾಲೂಕು ಒಳಗೊಂಡ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 92,226 ಪುರುಷರು ಹಾಗೂ 99,905 ಮಹಿಳಾ ಮತದಾರರು ಸೇರಿ 1,92,131 ಮತದಾರರಿದ್ದು, 209 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಸಂಪರ್ಕ ರಸ್ತೆಯಲ್ಲಿ ತಪಾಸಣೆ
ಈ ಹಿಂದೆ ಚುನಾವಣೆ ನಡೆಯುವ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಬಾರಿ ಒಳಭಾಗದ ಸಂಪರ್ಕ ರಸ್ತೆಗಳಿಗೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಹೊಸದಾಗಿ ಈ ಬಾರಿ ರೆಂಜಾಳ ಮಂಜೊಟ್ಟು ಬಳಿಯಲ್ಲಿ ಹಾಗೂ ಬೋಳ ಗ್ರಾಮದ ಬರಬೈಲ್ ಪ್ರದೇಶದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಗ್ರಾಮೀಣ ಭಾಗದ ಒಳ ರಸ್ತೆಯಲ್ಲಿ ಸಂಪರ್ಕ ರಸ್ತೆಗೆ ಅಳವಡಿಸಿರುವ ಚೆಕ್‌ಪೋಸ್ಟ್ ಬಳಿಯಲ್ಲಿ ಕೆಲವೊಂದು ಕಡೆಗಳಲ್ಲಿ ಯಾವುದೇ ಅಂಗಡಿ, ಹೋಟೆಲ್ ವ್ಯವಸ್ಥೆಗಳಿಲ್ಲ. ಚೆಕ್‌ಪೋಸ್ಟ್ ಸಿಬ್ಬಂದಿ ನೀರು, ಚಹಾ, ತಿಂಡಿಗಾಗಿ ಐದಾರು ಕಿ.ಮೀ ದೂರ ಕ್ರಮಿಸಬೇಕು. ಅಲ್ಲದೆ ಕುಡಿಯುವ ನೀರಿಗಾಗಿ ಸ್ಥಳೀಯ ಮನೆಗಳನ್ನು ಆಶ್ರಯಿಸಬೇಕು. ಹೊಸದಾಗಿ ಆರಂಭಗೊಂಡ ಚೆಕ್‌ಪೋಸ್ಟ್‌ಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಸಿಸಿಟಿವಿ ಕ್ಯಾಮರ ಅಳವಡಿಕೆಯ ಕಾರ್ಯ ಮಾತ್ರ ಇನ್ನೂ ನಡೆದಿಲ್ಲ. ಹೀಗಾಗಿ ಸಿಬ್ಬಂದಿಗಳಿಗೆ ಹೆಚ್ಚುವರಿ ಹೊರೆ ಬಿದ್ದಿದೆ.
ಕಾರ್ಕಳ ತಾಲೂಕಿನ ಈದು, ಮಾಳ, ರೆಂಜಾಳ ಮಂಜೊಟ್ಟು, ಸಾಣೂರು, ಮುಂಡ್ಕೂರು ಜಾರಿಗೆಕಟ್ಟೆ, ಹಾಗೂ ಹೆಬ್ರಿ ತಾಲೂಕಿನ ಸೋಮೇಶ್ವರದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ.
ಶಸ್ತ್ರಾಸ್ತ ಪೊಲೀಸರ ವಶಕ್ಕೆ
ಚುನಾವಣೆ ಸಂದರ್ಭ ಅಹಿತರಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಶಸ್ತ್ರಾಸ್ತಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವ ಕಾರ್ಯ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಈಗಾಗಲೇ ಕಾರ್ಕಳ ಗ್ರಾಮಾಂತರ, ಕಾರ್ಕಳ ನಗರ ಹಾಗೂ ಅಜೆಕಾರು, ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಸ್ತ್ರಾಸ್ತಗಳನ್ನು ಪೊಲೀಸ್ ಠಾಣೆಗೆ ನೀಡುವ ಪ್ರಕ್ರಿಯೆ ಶುರುವಾಗಿದೆ.
ಬ್ಯಾನರ್ ತೆರವು
ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ ಇತ್ತ ಅಧಿಕಾರಿಗಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಪ್ಲೆಕ್ಸ್ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದನ್ವಯ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಬಂಟಿಂಗ್ಸ್, ಪ್ಲೆಕ್ಸ್ ಬ್ಯಾನರ್‌ಗಳನ್ನು ತೆರವುಗೊಳಿಸಲು ಸ್ಥಳಿಯಾಡಳಿತ ಹಾಗೂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಏಳು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
-ನರಸಪ್ಪ, ಕಾರ್ಕಳ ತಹಶೀಲ್ದಾರ್