More

    ಬಿಜೆಪಿಯದು ಜಾತಿ, ಧರ್ಮಾಧಾರಿತ ರಾಜಕೀಯ: ಮಧು ಬಂಗಾರಪ್ಪ

    ಹೊಳೆಹೊನ್ನೂರು: ಬಿಜೆಪಿ ನಾಯಕರು ಶ್ರೀರಾಮನ ಹೆಸರಿನಲ್ಲಿ ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಟೀಕಿಸಿದರು.
    ಪಟ್ಟಣದ ಭಗೀರಥ ವೃತ್ತದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದರೆ ಬ್ರಿಟಿಷ್ ಜನತಾ ಪಾರ್ಟಿ. ಬ್ರಿಟಿಷರ ಒಡೆದಾಳುವ ನೀತಿಯನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಆರೋಪಿಸಿದರು.
    ಬಿಜೆಪಿ ಜಾತಿ, ಧರ್ಮಗಳ ಹೆಸರಿನಲ್ಲಿ ಸಂಘರ್ಷ ಸೃಷ್ಟಿ ಮಾಡುತ್ತಿದೆ. ಇಲ್ಲಿಯವರೆಗೆ ದೇಶದಲ್ಲಿ ಯಾವೊಂದೂ ಶಾಶ್ವತ ಯೋಜನೆಯನ್ನು ಜಾರಿಗೊಳಿಸಿಲ್ಲ. ರಾಜ್ಯದಲ್ಲಿ ಬಂಗಾರಪ್ಪ ನೀಡಿದ ಅಕ್ಷಯ, ಆರಾಧನಾ, ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ ಸೇರಿ ಹಲವು ಯೋಜನೆಗಳು ರಾಜ್ಯದ ಜನರ ಏಳಿಗೆಗೆ ಕಾರಣವಾಗಿವೆ ಎಂದರು.
    ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ರಾಜಕೀಯ ಗುಣ ನನಗೆ ರಕ್ತದಲ್ಲೇ ಇದೆ. ಬಹಳ ಜನ ವಿರೋಧಿಗಳು ನಮ್ಮ ರಾಜಕೀಯ ನಡೆಯನ್ನು ವಿರೋಧಿಸುತ್ತ ಕೇವಲವಾಗಿ ಟೀಕಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ನನಗೆ ರಾಜಕೀಯ ಗುಣ ತಂದೆ ಎಸ್. ಬಂಗಾರಪ್ಪ ಅವರಿಂದ ಬಳುವಳಿಯಾಗಿ ಬಂದಿದೆ. ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ. ರಾಜ್ಯ ಸರ್ಕಾರವು ದುಡಿಯುವ ವರ್ಗದ ಪರವಾಗಿ ನಿರಂತರ ಕಾರ್ಯಕ್ರಮ ನೀಡುತ್ತ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
    ನಟ ಶಿವರಾಜ್‌ಕುಮಾರ್ ಮಾತನಾಡಿ, ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೀವಿ ಅನ್ನೋ ಭರವಸೆ ನನ್ನದು. ನಾವು ಎಂದಿಗೂ ಮಾತು ತಪ್ಪುವುದಿಲ್ಲ. ನಮ್ಮ ಕುಟುಂಬ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಇದಕ್ಕಾಗಿ ಮತದಾರ ನೀಡುವ ಪವರ್ ಅತಿಮುಖ್ಯ. ಹೇಳಿದ್ದನ್ನು ಮಾಡಿ ಮುಗಿಸುವುದು ನಮ್ಮ ಜಾಯಮಾನ ಎಂದರು. ಜಿಲ್ಲಾಧ್ಯಕ್ಷ ಸುಂದರೇಶ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು, ಡಾ. ಶ್ರೀನಿವಾಸ್ ಕರಿಯಣ್ಣ, ಎನ್.ರಮೇಶ್, ಆಯನೂರು ಮಂಜುನಾಥ, ಕಲಗೋಡು ರತ್ನಾಕರ್, ಎಚ್.ಎಲ್.ಷಡಕ್ಷರಿ, ಶಾಂತವೀರನಾಯ್ಕ, ಬಲ್ಕಿಷ್‌ಬಾನು, ರೇಖಾ ಉಮೇಶ್, ಶ್ರೀಕಾಂತ್, ಎಚ್.ಆರ್.ತಿಮ್ಮಪ್ಪ, ಎಚ್.ಜಿ.ಮಲ್ಲಯ್ಯ ಇತರರಿದ್ದರು.

    ಪೇಚಿಗೆ ಸಿಲುಕಿದ ಆಯನೂರು
    ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡುವ ಭರದಲ್ಲಿ ಕಾಂಗ್ರೆಸ್‌ಗೆ ಮತಹಾಕಿ ಎನ್ನುವ ಬದಲು ಬಿಜೆಪಿಗೆ ಮತಹಾಕಿ ಎಂದು ಹೇಳಿ ಪೇಚಿಗೆ ಸಿಲುಕಿದರು. ಸಾರ್ವಜನಿಕರೇ ತಕ್ಷಣ ಎಚ್ಚರಿಸಿ ಬಿಜೆಪಿ ಅಲ್ಲ, ಕಾಂಗ್ರೆಸ್ ಎಂದು ತಿಳಿಸಿದರು. ತಕ್ಷಣವೇ ಎಚ್ಚೆತ್ತುಕೊಂಡು ಬಾಯಿತಪ್ಪಿನಿಂದ ಬಂದ ಮಾತು ಎಂದು ಕಾಂಗ್ರೆಸ್‌ಗೆ ಮತ ಹಾಕಿ ಎಂದು ಕೇಳಿದರು. ಇದೇ ವೇಳೆ ವೇದಿಕೆಯಲ್ಲಿ ಮೊಬೈಲ್ ನೋಡಿಕೊಂಡು ಕುಳಿತಿದ್ದ ಮಧು ಬಂಗಾರಪ್ಪ ಅವರ ಕಡೆ ತಿರುಗಿ ಕೈಮುಗಿದ ಆಯನೂರು, ಬಾಯಿ ತಪ್ಪಿನಿಂದಾಗಿ ಬಿಜೆಪಿಗೆ ಹಾಕಬೇಡಿ ಎಂದು ಹೇಳಲು ಹೋಗಿದ್ದು ಎಂದು ಸಮಜಾಯಿಷಿ ನೀಡಿದರು. ಆಯನೂರು ಮಾತನ್ನು ಸರಿಪಡಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜಾಗೃತರಾಗಿದ್ದಾರೋ ಅಥವಾ ಇಲ್ಲವೋ ಎಂದು ಪರೀಕ್ಷೆಗೆ ಒಳಪಡಿಸಿ ಎಂದು ಆಯನೂರಿಗೆ ಹೇಳಿದ್ದೆ. ಪರೀಕ್ಷೆಯಲ್ಲಿ ಕಾರ್ಯಕರ್ತರು ಪಾಸ್ ಆಗಿದ್ದಾರೆ ಎಂದು ಹೇಳಿ ಆಯನೂರು ಮಾತನ್ನು ಮರೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts