More

    ಪೋರ್ಚುಗೀಸರ ದುರಾಡಳಿತದಿಂದ ಊರು ಬಿಟ್ಟರೂ ಧರ್ಮ ಬಿಡದ ಸಮಾಜ: ಜಿಎಸ್‌ಬಿ ಸಮುದಾಯದ ಕಷ್ಟ ಕಾಲವನ್ನು ಸ್ಮರಿಸಿದ ಪೇಜಾವರ ಶ್ರೀ

    ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
    ರಾಮಮಂದಿರ ಕನಸು ನನಸಾಯಿತು. ಇನ್ನು ಬಾಕಿಯಿರುವ ರಾಮರಾಜ್ಯದ ಕನಸಿಗಾಗಿ ಎಲ್ಲರೂ ಶ್ರಮಿಸೋಣ. ರಾಮದೇವರ ಅನುಗ್ರಹ, ನಮ್ಮ ಪ್ರಯತ್ನದಿಂದ ಕನಸು ಶೀಘ್ರ ನನಸಾಗಲಿ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

    ಆಯೋಧ್ಯಾ ಕಾಶಿ ಪುಣ್ಯ ಪರಿಕ್ರಮದ ಸವಿನೆನಪಿಗಾಗಿ ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇವಳದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.

    ಊರು ಬಿಟ್ಟರೂ ಧರ್ಮ ಬಿಡದ ಸಮಾಜ

    ಪೋರ್ಚುಗೀಸರ ದುರಾಡಳಿತದಿಂದ ಊರನ್ನಾದರೂ ಬಿಟ್ಟೆವು, ಧರ್ಮ ಬಿಡಲಾರೆವೆನ್ನುತ್ತ ಬರಿಗೈಲಿ ಬಂದ ಜಿಎಸ್‌ಬಿ ಸಮಾಜ, ಇಂದಿಗೂ ಧರ್ಮನಿಷ್ಠೆಯಿಂದ ದೇವರ ಅನುಗ್ರಹದಿಂದ ಒಳ್ಳೆಯ ಬದುಕು ಸಾಗಿಸುತ್ತಿದೆ. ಮೂರು ತಲೆಮಾರಿಗೂ ಧರ್ಮದ ಬದುಕು, ಸಂಸ್ಕೃತಿ, ಆಚಾರ-ವಿಚಾರ ಬಲವಾಗಿ ನೆಲೆ ನಿಲ್ಲಬೇಕು ಎಂದು ಎಲ್ಲರಿಗೂ ಮಾರ್ಗದರ್ಶನ ಮಾಡಿ ಏಕತೆ, ಒಗ್ಗಟ್ಟನ್ನು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕವಾಗಿ ಇಟ್ಟುಕೊಂಡು ಬಂದಿದ್ದರಿಂದ ದೇವರ ಅನುಗ್ರಹ ಸದಾ ತಮ್ಮನ್ನೆಲ್ಲ ಕಾಪಾಡಿದೆ. ಅಯೋಧ್ಯೆ ರಾಮನಿಗೆ ತನು, ಮನ, ಧನದಿಂದ ಪರಿಪೂರ್ಣ ಸೇವೆ ಸಲ್ಲಿಸಿ ಆ ಪ್ರಸಾದ ಹಂಚುತ್ತಿರುವ ಸಮಾಜಕ್ಕೆ ರಾಮದೇವರ ಅನುಗ್ರಹ ಸದಾ ಇರಲಿ ಎಂದು ಶ್ರೀಗಳು ಹರಸಿದರು.

    ಕಾಪು ಮಹತೋಭಾರ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನದ ತಂತ್ರಿ ಕೆ.ಪಿ.ಶ್ರೀನಿವಾಸ ತಂತ್ರಿ ಮಡುಂಬು, ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳಾದ ಸದಾಶಿವ ಕಾಮತ್, ರಾಮ ನಾಯಕ್, ರಾಜೇಶ್ ಶೆಣೈ, ಶ್ರೀಕಾಂತ್ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಕುಲ್‌ದಾಸ್ ಶೆಣೈ, ಆಡಳಿತ ಕಮಿಟಿ ಸದಸ್ಯರಾದ ಮೋಹನದಾಸ್ ಕಿಣಿ, ರಾಜೇಶ್ ಶೆಣೈ ಮಜೂರು, ಸುನೀಲ್ ಪೈ, ಕೃಷ್ಣಾನಂದ ನಾಯಕ್, ಚಂದ್ರಕಾಂತ್ ಕಾಮತ್, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಶೆಣೈ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಪ್ರಮುಖರಾದ ಸಂಜಯ್ ಭಟ್, ಓಂ ಕಿಣಿ, ಶ್ರೀನಿವಾಸ ಶೆಣೈ ಶಿರ್ವ, ನರಸಿಂಹ ಪೈ ಕಟಪಾಡಿ, ಪ್ರಸಾದ್ ಕಾಮತ್ ಕಾಪು ಮೊದಲಾದವರು ಉಪಸ್ಥಿತರಿದ್ದರು.
    ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ.ಶೆಣೈ ಸ್ವಾಗತಿಸಿದರು. ಡಾ.ಸದಾನಂದ ಭಟ್ ನಿರೂಪಿಸಿದರು.

    ಪೂರ್ಣಕುಂಭ ಸ್ವಾಗತ, ಪಾದಪೂಜೆ

    ಪುಣ್ಯ ಪರಿಕ್ರಮ ಸವಿನೆನಪಿಗಾಗಿ ವೆಂಕಟರಮಣ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ, ಲಘು ವಿಷ್ಣು ಪಾರಾಯಣ, ಪವಿತ್ರ ಕಾಶಿ ಗಂಗಾ ಜಲ ಸಹಿತ ವಿವಿಧ ದ್ರವ್ಯಗಳಿಂದ ಶ್ರೀ ದೇವರಿಗೆ ಲಘು ವಿಷ್ಣು ಅಭಿಷೇಕ, ಪ್ರಧಾನ ಅರ್ಚಕ ಕಮಲಾಕ್ಷ ಭಟ್ ನೇತೃತ್ವದಲ್ಲಿ ನೆರವೇರಿತು. ವಾದ್ಯ ಘೋಷ, ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಮೀಜಿ ಅವರನ್ನು ದೇವಳಕ್ಕೆ ಕರೆತರಲಾಯಿತು. ಶ್ರೀದೇವರ ಭೇಟಿ, ಶ್ರೀಗಳಿಗೆ ಸಮಸ್ತರ ಪರ ಪಾದಪೂಜೆ, ಗೌರವಾರ್ಪಣೆ ಸಲ್ಲಿಸಲಾಯಿತು. ಫಲ ಮಂತ್ರಾಕ್ಷತೆ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts